ಕ್ರೀಡಾ ಸ್ಪೂರ್ತಿಯಿಂದ ಕಾರ್ಯದಕ್ಷತೆ ಹೆಚ್ಚಳ: ಶೀಲಾ ಶೆಟ್ಟಿ

ಉಡುಪಿ, ನ. 29: ಸರಕಾರಿ ನೌಕರರು ಕ್ರೀಡೆಗಳಲ್ಲಿ ತೊಡಗಿಕೊಂಡು ಕ್ರೀಡಾ ಸ್ಪೂರ್ತಿ ಪಡೆಯುವ ಮೂಲಕ ತಮ್ಮ ದೈನಂದಿನ ಕರ್ತವ್ಯಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಾಧ್ಯ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.
ಗುರುವಾರ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಉಡುಪಿ ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನೌಕರರು ದೈನಂದಿನ ಕೆಲಸಗಳ ಒತ್ತಡದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡಿಮೆ. ಆದರೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿಸುವುದರಿಂದ ಕ್ರೀಡಾ ಸ್ಪೂರ್ತಿ ಪಡೆದು, ತಮ್ಮ ಕರ್ತವ್ಯದಲ್ಲಿ ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಪಡೆದ ಅಗ್ನಿಶಾಮಕ ಇಲಾಖೆಯ ಅಶ್ವಿನ್ ಸನಿಲ್ ಮತ್ತು ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ದಲ್ಲಿ ಪದಕ ಪಡೆದ ನೌಕರರನ್ನು ಸನ್ಮಾನಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಸರಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಗೌರವ ಅಧ್ಯಕ್ಷ ರವೀಂದ್ರ ಹೆಬ್ಬಾರ್, ಕೋಶಾಧಿಕಾರಿ ಚಂದ್ರಶೇಖರ್, ಕಾರ್ಕಳ ತಾಲೂಕು ನೌಕರರ ಸಂಘದ ಅಧ್ಯಕ್ಷ ಮೈಕಲ್ ಜೋಕಿಂ ಪಿಂಟೋ, ಕುಂದಾಪುರ ತಾಲೂಕು ನೌಕರರ ಸಂಘದ ಅಧ್ಯಕ್ಷ ದಿನಕರಶೆಟ್ಟಿ ಅಂಪಾರು, ಕಾಪು ತಾಲೂಕು ನೌಕರರ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ ಉಪಸ್ಥಿತರಿದ್ದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ವಂದಿಸಿ, ಪ್ರಶಾಂತ್ ಾವಂಜೆ ಕಾರ್ಯಕ್ರಮ ನಿರೂಪಿಸಿದರು.







