ಬಂಡವಾಳ ಹೂಡಿಕೆದಾರರಿಗೆ ಬೆಂಗಳೂರು ಸೂಕ್ತ ನಗರ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ನ.29: ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 40 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಬೆಂಗಳೂರು ಬಂಡವಾಳ ಹೂಡಿಕೆದಾರರಿಗೆ ಸೂಕ್ತ ನಗರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಿಸಿದರು.
ಗುರುವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬೆಂಗಳೂರು ಟೆಕ್ ಸಮ್ಮಿಟ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರತಿ ಜಿಲ್ಲೆಯು ವಿಶ್ವದ ಯಾವುದೇ ದೇಶದ ಹೂಡಿಕೆದಾರರಿಗೆ ಸೂಕ್ತ ಪ್ರದೇಶವಾಗಿದೆ ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಗಳು ನೇರ ನೇಮಕಾತಿ ಮೂಲಕ 10 ಲಕ್ಷ ಜನರಿಗೆ ಉದ್ಯೋಗ ನೀಡಿವೆ. ಉಳಿದಂತೆ ಪರೋಕ್ಷವಾಗಿ 30 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. ಇಷ್ಟೊಂದು ಪ್ರಮಾಣದ ಉದ್ಯೋಗ ಸೃಷ್ಟಿಸಿರುವುದೆ ಬಂಡವಾಳ ಹೂಡಿಕೆಗೆ ಬೆಂಗಳೂರು ಉತ್ತಮ ನಗರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಖಾಸಗಿ ಅಧ್ಯಯನ ಸಂಸ್ಥೆಯ ಪ್ರಕಾರ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳ ಎಂಜಿನಿಯರಿಂಗ್ ಹಾಗೂ ಆವಿಷ್ಕಾರ, ಅಭಿವೃದ್ಧಿ ಕೇಂದ್ರಗಳ ಪ್ರಮಾಣ ಹೆಚ್ಚಳಗೊಂಡಿದೆ. 2016ರಲ್ಲಿದ್ದ 943 ಕೇಂದ್ರಗಳು 2017ರ ವೇಳೆಗೆ 976ಕ್ಕೆ ಹೆಚ್ಚಳಗೊಂಡಿವೆ. ಜಾಗತಿಕ ಮಟ್ಟದಲ್ಲಿ ಶೇ.67ರಷ್ಟಿರುವ ಅಮೆರಿಕಾದ ಗ್ಲೋಬಲ್ ಇನ್‌ಹೌಸ್ ಕೇಂದ್ರಗಳಲ್ಲಿ ಶೇ.37ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿಯೇ ಇವೆ ಎಂದು ಅವರು ವಿವರಿಸಿದರು.
ಬೆಂಗಳೂರು ಸಮ್ಮಿಟ್ 21ನೆ ಆವೃತ್ತಿ ರಾಜ್ಯದ ಪರಿಸರ ವ್ಯವಸ್ಥೆಯ ಯಶಸ್ವಿಗೆ ಸಾಕ್ಷಿಯಾಗಿದೆ. ಸರಕಾರ ಕೈಗಾರಿಕಾ ಕ್ಷೇತ್ರ, ಆವಿಷ್ಕಾರ ಮತ್ತು ಅಭಿವೃದ್ಧಿ ಸಂಸ್ಥೆಗಳೊಂದಿಗೆ ಸೇರಿ ಬೆಂಗಳೂರಿನಲ್ಲಿ ಉತ್ಕೃಷ್ಟ ಪರಿಸರ ವ್ಯವಸ್ಥೆ ಸೃಷ್ಟಿಸಲಾಗಿದೆ. ಬಂಡವಾಳ ಹೂಡಿಕೆದಾರರಿಗೆ ಈ ವ್ಯವಸ್ಥೆ ಹೊಸ ಹೊಸ ಚಿಂತನೆಗಳನ್ನು ನೀಡಲಿದೆ. ಇದು ಆರ್ಥಿಕಾಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ಬಣ್ಣಿಸಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಬೆಂಗಳೂರು ಐಟಿಬಿಟಿ ಕ್ಷೇತ್ರದಲ್ಲಿ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಬೆಂಗಳೂರು ಸಮ್ಮಿಟ್ ತಂತ್ರಾಂಶ, ತಂತ್ರಜ್ಞಾನ, ಕೃತಕ ಬುದ್ಧಿವಂತಿಕೆ ಕ್ಷೇತ್ರ, ಜೈವಿಕ ತಂತ್ರಜ್ಞಾನ ಕ್ಷೇತ್ರ ಉತ್ತಮವಾಗಿ ಬೆಳವಣಿಗೆಯಾಗಿದೆ. ನಮ್ಮಲ್ಲಿ ಸೃಷ್ಟಿಯಾದ ತಂತ್ರಜ್ಞಾನಗಳನ್ನು ಇತರರಿಗೆ ನೀಡುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಐಟಿಬಿಟಿ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಫ್ರಾನ್ಸ್ ರಾಯಬಾರಿ ಅಲೆಗ್ಸಾಂಡರ್, ಬಯೋಟೆಕ್ ಕಂಪನಿಯ ಕಿರಣ್ ಮಜುಂದಾರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ 2020ರ ವೇಳೆಗೆ ಆವಿಷ್ಕಾರ ಮತ್ತು ತಂತ್ರಜ್ಞಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ರಾಜ್ಯದ ಪರಿಸರ ವ್ಯವಸ್ಥೆ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ವರ್ಷದ ಬೆಂಗಳೂರು ಸಮ್ಮಿಟ್ ನೈಜ ಅಂತರ್‌ರಾಷ್ಟ್ರೀಯ ಮಟ್ಟದ ಅನುಭವವನ್ನು ನೀಡುವುದರೊಂದಿಗೆ ಉತ್ತಮ ಆವಿಷ್ಕಾರಗಳಿಗೆ ಅವಕಾಶವನ್ನು ಸಹ ಒದಗಿಸಲಿದೆ.
-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ







