ಇದು ನನ್ನ ಬದುಕಿನ ಕರಾಳ ದಿನ: ಮಿಥಾಲಿ ರಾಜ್

ಹೊಸದಿಲ್ಲಿ, ನ.29: ಕೋಚ್ ರಮೇಶ್ ಪೊವಾರ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ವನಿತೆಯರ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇದು ನನ್ನ ಬದುಕಿನ ಕರಾಳ ದಿನವಾಗಿದೆ ಎಂದು ಹೇಳಿದ್ದಾರೆ.
‘‘ನನ್ನ ವಿರುದ್ಧ ಮಾಡಿರುವ ಆರೋಪಗಳಿಂದ ಅತೀವ ನೋವುಂಟಾಗಿದ್ದು, ದೇಶಕ್ಕಾಗಿ ಎರಡು ದಶಕಗಳ ಕಾಲ ಕ್ರಿಕೆಟ್ ಆಡಿರುವುದು , ನನ್ನ ಬದ್ಧತೆ ಎಲ್ಲವೂ ವ್ಯರ್ಥವಾಗಿದೆ ’’ಎಂದು ಮಿಥಾಲಿ ರಾಜ್ ಟ್ವೀಟ್ ಮಾಡಿದ್ದಾರೆ.
‘‘ ಇಂದು ನನ್ನ ಕೊಡುಗೆಯನ್ನು , ಕೌಶಲ್ಯವನ್ನು , ದೇಶಭಕ್ತಿಯನ್ನು ಸಂಶಯದಿಂದ ನೋಡಲಾಗುತ್ತಿದೆ . ನನಗೆ ಎದುರಾಗಿರುವ ಕಷ್ಟಗಳನ್ನು ಎದುರಿಸಲು ದೇವರು ಶಕ್ತಿ ನೀಡಲಿ’’ ಎಂದು ಮಿಥಾಲಿ ಹೇಳಿದ್ದಾರೆ.
ಕೋಚ್ ಪೊವಾರ್ ಬುಧವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಕಾರ್ಯಾಚರಣೆಯ ಜನರಲ್ ಮ್ಯಾನೇಜರ್ ಸಾಬಾ ಕರೀಂ ಅವರನ್ನು ಭೇಟಿಯಾಗಿ 10 ಪುಟಗಳ ಪ್ರವಾಸ ವರದಿಯನ್ನು ಒಪ್ಪಿಸಿದ್ದರು. ಮಿಥಾಲಿ ರಾಜ್ ವಿರುದ್ಧ ಪೊವಾರ್ ನಾನಾ ಆರೋಪ ಮಾಡಿದ್ದರು. ಉದಾಸೀನ ಪ್ರವೃತ್ತಿಯ ಮಿಥಾಲಿ ರಾಜ್ ಸ್ವಹಿತಾಸಕ್ತಿ ಕಡೆಗೆ ಗಮನ ನೀಡುತ್ತಿದ್ದಾರೆ. ತಂಡದ ಹಿತ ಅವರಿಗೆ ಮುಖ್ಯವಲ್ಲ ಎಂದು ಆರೋಪ ಮಾಡಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಮಿಥಾಲಿ ರಾಜ್ ಅವರಲ್ಲಿ ಕೇಳಿಯೇ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಲಾಗಿತ್ತು. ಆದರೆ ಬಳಿಕ ಇದರಿಂದ ಅಸಮಾಧಾನಗೊಂಡು ನಿವೃತ್ತಿಯ ಬೆದರಿಕೆ ಹಾಕಿದ್ದರು. ಗಂಟುಮೂಟೆ ಕಟ್ಟಿಕೊಂಡು ತವರಿಗೆ ತೆರಳಲು ತಯಾರಿ ನಡೆಸಿದ್ದರು. ಈ ವಿಚಾರವನ್ನು ವೀಡಿಯೊ ವಿಶ್ಲೇಷಕರಾದ ಪುಷ್ಕರ್ ಸಾವಂತ್ ತಮಗೆ ತಿಳಿಸಿರುವುದಾಗಿ ಪೊವಾರ್ ವರದಿಯಲ್ಲಿ ವಿವರಿಸಿದ್ದಾರೆ.
35ರ ಹರೆಯದ ಮಿಥಾಲ್ ರಾಜ್ ಅವರನ್ನು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅಂತಿಮ ಹನ್ನೊಂದರ ಬಳಗದಿಂದ ಕೈ ಬಿಡಲಾಗಿತ್ತು. ಭಾರತ ಈ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲು ಅನುಭವಿಸುವುದರೊಂದಿಗೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತ್ತು. ಮಿಥಾಲ್ ರಾಜ್ ಕೈ ಬಿಟ್ಟಿರುವ ವಿಚಾರ ಸಂಶಯಕ್ಕೆ ಕಾರಣವಾಗಿತ್ತು.
ಮಿಥಾಲಿರಾಜ್ ಈ ವಿಚಾರದಲ್ಲಿ ಕೋಚ್ ರಮೇಶ್ ಪೊವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.







