ಅಂಬಿ ಹೆಸರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿದ್ದರಾಮಯ್ಯ ಮನವಿ
ಅಂಬರೀಷ್ ಶ್ರದ್ಧಾಂಜಲಿ ಸಭೆ

ಬೆಂಗಳೂರು, ನ.30: ನಟ ಅಂಬರೀಷ್ ಅವರ ಆಸೆಯಂತೆ ಮೈಸೂರಿನಲ್ಲಿ ಫಿಲ್ಮ್ ಸಿಟಿ(ಚಿತ್ರನಗರಿ) ನಿರ್ಮಾಣವಾಗಿ, ಅದಕ್ಕೆ ಅಂಬರೀಷ್ ಹೆಸರಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮ ಆಯೋಜಿಸಿದ್ದ, ಡಾ.ಅಂಬರೀಷ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರಿನಲ್ಲಿ ಫಿಲ್ಮ್ ಸಿಟಿ(ಚಿತ್ರನಗರಿ) ನಿರ್ಮಿಸಬೇಕು ಎಂಬುದು ಅಂಬರೀಷ್ ಅವರ ಆಸೆಯಾಗಿತ್ತು. ಅದಕ್ಕಾಗಿ, ನನ್ನ ಸರಕಾರದ ಅವಧಿಯಲ್ಲಿ ಭೂಮಿ ಮಂಜೂರು ಮಾಡಿದ್ದು, ಕೆಲಸ ಪ್ರಗತಿಯಲ್ಲಿದೆ. ಇದನ್ನು ಇನ್ನಷ್ಟು ಚುರುಕುಗೊಳಿಸಿ ಅಂಬರೀಷ್ ಅವರ ಹೆಸರಿಡಿ ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸಿದರು.
ಅಂಬರೀಷ್ ಅವರು 1973ರಲ್ಲಿ ನನಗೆ ಪರಿಚಯವಾದರು. ಆಗ ನಾನು ವಕೀಲನಾಗಿದ್ದೆ. ಒಂದು ಹೊಟೇಲ್ ನಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಆ ವೇಳೆಗೆ ಅವರು ನಾಗರಹಾವು ಚಿತ್ರದಲ್ಲಿ ನಟಿಸಿದ್ದರು. ಅವರ ಮಾತು ಬಹಳ ಒರಟಾದರೂ ಹೃದಯ ತುಂಬಾ ಮೃದು, ಸ್ನೇಹ ಜೀವಿ. ಯಾವುದೇ ಸ್ಥಾನ ಬಂದರು, ಹೋದರೂ ಸ್ನೇಹದಲ್ಲಿ ತಾರತಮ್ಯವಿರಲಿಲ್ಲ ಎಂದು ನುಡಿದರು.
ಚಿತ್ರರಂಗ, ರಾಜಕಾರಣ ಕ್ಷೇತ್ರಗಳಿಗೆ ಅವರು ಬಯಸಿ ಬಂದವರಲ್ಲ. ದೇವೇಗೌಡರು ಪ್ರಧಾನಮಂತ್ರಿಯಾಗಿ ದೆಹಲಿಗೆ ಹೋದಾಗ ನಾವು ಒತ್ತಾಯ ಮಾಡಿ ಅಂಬರೀಷ್ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೆವು. ಮಂಡ್ಯ, ರಾಮನಗರ ಎರಡೂ ಕ್ಷೇತ್ರಗಳಲ್ಲೂ ಅಂಬರೀಷ್ ತಮ್ಮದೇ ಆದ ಛಾಪು ಮೂಡಿಸಿದ್ದರು. ರಾಜಕೀಯ ಅಥವಾ ಚಿತ್ರರಂಗದಲ್ಲಾಗಲಿ ಅಂಬರೀಷ್ ಅವರಿಗೆ ವೈರಿಗಳೇ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.







