ಎಸ್ಸಿ-ಎಸ್ಟಿ ಕಾಲನಿಗಳ ಮೂಲಸೌಲಭ್ಯ ಅಭಿವೃದ್ಧಿಗೆ 202 ಕೋಟಿ ರೂ.ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ನ. 30: ಎಸ್ಸಿ-ಎಸ್ಟಿ ವರ್ಗದ ಜನರು ಹೆಚ್ಚು ವಾಸಿಸುವ ಕಾಲನಿಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ‘ಪ್ರಗತಿ ಕಾಲನಿ’ ಕಾರ್ಯಕ್ರಮದಂತೆ 123 ಕ್ಷೇತ್ರಗಳಿಗೆ ಎಸ್ಸಿ-ಎಸ್ಟಿ ಉಪಯೋಜನೆಯಡಿ 202 ಕೋಟಿ ರೂ.ಬಿಡುಗಡೆ ಮಾಡಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಎಸ್ಸಿ-ಎಸ್ಟಿ ವರ್ಗದ ಜನರು ಹೆಚ್ಚು ವಾಸಿಸುವ ಕಾಲನಿಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳ ಚರಂಡಿ, ಸಂಪರ್ಕ ರಸ್ತೆ ಸೇರಿದಂತೆ ಇನ್ನಿತರ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ತಕ್ಷಣವೆ ಸನ್ನದ್ಧರಾಗಬೇಕು. ಅಲ್ಲದೆ, ಜಿಲ್ಲಾಧಿಕಾರಿಗಳು, ಶಾಸಕರೊಂದಿಗೆ ಚರ್ಚಿಸಿ ಸ್ಥಳ ನಿಗದಿ ಮಾಡಿಕೊಂಡು ಅನುದಾನವನ್ನು ನಿಗದಿತ ಸಮಯದೊಳಗೆ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.
ಈಗಾಗಲೆ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳನ್ನು ಹೊರತು ಪಡಿಸಿ ಹೊಸ ಸೌಲಭ್ಯಗಳನ್ನು ಒದಗಿಸಲೂ ಆದೇಶಿಸಿದ್ದು, ಶಾಸಕರು ಸಲ್ಲಿಸಿದ್ದ ಪ್ರಸ್ತಾವಗಳನ್ನು ಆಯಾ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಈ ಪ್ರಸ್ತಾವಗಳಲ್ಲಿ ಸೂಚಿಸಲಾಗಿರುವ ಮೂಲಸೌಲಭ್ಯ ಕಾಮಗಾರಿಗಳ ವಿವರಗಳನ್ನು ಸಂಬಂಧಿಸಿದ ಶಾಸಕರೊಂದಿಗೆ ಚರ್ಚಿಸಿ 2019ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ.
ಎಸ್ಸಿ-ಎಸ್ಟಿ ವರ್ಗದ ಜನರು ಶೇ.50ಕ್ಕಿಂತಲೂ ಹೆಚ್ಚಿರುವ ಪ್ರತಿ ಕ್ಷೇತ್ರದಲ್ಲಿ ಒಂದು ಪ್ರಗತಿ ಕಾಲನಿಯನ್ನು ಆಯ್ಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಗತಿ ಕಾಲನಿಯ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ತಿಳಿಸಲಾಗಿದೆ. ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ.ಕಾಮಗಾರಿಗಳ ವಿಭಾಗದಿಂದ ಕೆಟಿಟಿಪಿ ನಿಯಮಗಳಂತೆ ಕೈಗೆತ್ತಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಎಸ್ಸಿ-ಎಸ್ಟಿ ವರ್ಗಗಳ ಉಪಯೋಜನೆಯ ನಿಯಗಳಡಿ ಜಿಲ್ಲಾಧಿಕಾರಿಗಳು ಜಿಲ್ಲಾ ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿದ್ದು, ಎಸ್ಸಿಪಿ-ಟಿಎಸ್ಪಿ ನಿಯಮ 11ರಂತೆ ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಸೂಚಿಸಿದ್ದಾರೆ.
ಅಧಿಕಾರಿಗಳೇ ಹೊಣೆ, ಕಠಿಣ ಕ್ರಮ
ಎಸ್ಸಿ-ಎಸ್ಟಿ ವರ್ಗದ ಜನರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುವ ಕಾಲನಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಗತಿ ಕಾಲನಿ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಕಾಲನಿಗೆ ಅವಶ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಸಮಗ್ರವಾಗಿ ಪೂರೈಸುವುದು ಪ್ರಮುಖ ಉದ್ದೇಶ. ಕಾಮಗಾರಿಗಳನ್ನು ನಿಗದಿತ ವೇಳೆಯಲ್ಲಿ ಅನುಷ್ಠಾನಕ್ಕೆ ತರದಿದ್ದಲ್ಲಿ ಎಸ್ಸಿ-ಎಸ್ಟಿ ಉಪಯೋಜನೆಯಡಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.
-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ







