ವೇತನಕ್ಕಾಗಿ ಸರಕಾರಿ ಕಚೇರಿಗಳಿಗೆ ಮುತ್ತಿಗೆ: ಅಂಗನವಾಡಿ ಕಾರ್ಯಕರ್ತರ ಎಚ್ಚರಿಕೆ

ಬೆಂಗಳೂರು, ನ.30: ಬಾಕಿ ಉಳಿದಿರುವ 5 ತಿಂಗಳ ವೇತನ ಶೀಘ್ರದಲ್ಲಿಯೇ ನೀಡಬೇಕು. ಇಲ್ಲದಿದ್ದಲ್ಲಿ, ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಪುರಭವನದ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ನೇತೃತ್ವದಲ್ಲಿ ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಐದು ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸತತ ಐದು ತಿಂಗಳಿನಿಂದ ವೇತನ ಕೈ ಸೇರಿಲ್ಲ. ಇದರಿಂದ ದಿನನಿತ್ಯದ ಬದುಕು ಸಾಗಿಸಲು ಕಷ್ಟಕರವಾಗಿದೆ. ಮನವಿ, ಹೋರಾಟಗಳು ಈ ಸರಕಾರದ ಕಿವಿಗೆ ಬೀಳುತ್ತಿಲ್ಲ ಎಂದು ಪ್ರತಿಭಟನೆ ನಿರತ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಎಂಬುವರು ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಹಾಮಂಡಳಿ ಅಧ್ಯಕ್ಷ ಜಿ.ಆರ್. ಶಿವಶಂಕರ್, ರಾಜ್ಯದಲ್ಲಿ 204 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳು, ಇವುಗಳಲ್ಲಿ 181 ಗ್ರಾಮಾಂತರ, 11 ನಗರ ಹಾಗೂ 12 ಬುಡಕಟ್ಟು ಯೋಜನೆಗಳಿವೆ. 61,187 ಅಂಗನವಾಡಿ ಕೇಂದ್ರ, 3,331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, 1.28 ಲಕ್ಷಕ್ಕೂ ಅಧಿಕ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸರಕಾರ ಈ ಶ್ರಮಿಕರಿಗೆ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.







