ಅರಸನಂತೆ ಇದ್ದು, ಅಸರನಾಗಿಯೇ ಹೋದರು: ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕರಾದ ಅಂಬರೀಷ್ ಪತ್ನಿ ಸುಮಲತಾ

ಬೆಂಗಳೂರು, ನ.30: ಅಂಬರೀಷ್ ಕೇವಲ ನನ್ನವರಾಗಿ ಉಳಿಯದೆ, ನಾಡಿನ ಮಗನಾಗಿದ್ದರು. ಅರಸನಂತೆ ಬದುಕಿ, ಅರಸನಾಗಿಯೇ ಹೋದರು ಎಂದು ಹೇಳಿ ಅಂಬರೀಷ್ ಪತ್ನಿ ಸುಮಲತಾ ಭಾವುಕರಾದರು.
ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮ ಆಯೋಜಿಸಿದ್ದ, ಡಾ.ಅಂಬರೀಷ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ನೇಹಿತ, ಪತಿ, ಇನಿಯ, ತಂದೆ, ಸಹೋದರನಾಗಿ ಇದ್ದವರು. ರಾಜಕೀಯ ನಾಯಕ, ಸಮಾಜ ಸೇವಕನಾಗಿ ಬೆಳೆದವರು ಎಂದ ಅವರು, ಪುತ್ರ ಅಭಿಷೇಕ್‌ನ ಮೊದಲ ಚಿತ್ರ ನೋಡಬೇಕೆನ್ನುವುದು ಅಂಬರೀಷ್ ಆಸೆಯಾಗಿತ್ತು. ಅಭಿಷೇಕ್‌ನ ಮೇಲೂ ನಾಡಿನ ಜನತೆಯ ಆಶೀರ್ವಾದ ಇರಲಿ ಹೇಳಿದರು.
ನಟ ಜಗ್ಗೇಶ್ ಮಾತನಾಡಿ, ನಾವು ಸತ್ತ ಮೇಲೆ ಸ್ಮಾರಕ ನಿರ್ಮಿಸಲು ಸರಕಾರವನ್ನು ಜಾಗ ನೀಡಿ ಎಂದು ಕೇಳಿಕೊಳ್ಳಬೇಕಿಲ್ಲ. ನಮ್ಮ ಜಾಗ ನಾವೇ ನೋಡಿಕೊಳ್ಳುತ್ತೇವೆ. ಅಂಬರೀಷ್ ಮನಸ್ಸು ಮಾಡಿದ್ದರೆ ಯಾವುತ್ತೊ, ಮುಖ್ಯಮಂತ್ರಿ ಆಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕ ಮುನಿರತ್ನ, ಕಲಾವಿದರಾದ ಉಮಾಶ್ರೀ, ಶಿವರಾಜ್‌ಕುಮಾರ್, ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಅಭಿಷೇಕ್ ಗೌಡ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಅಮ್ಮನಿಗಾಗಿ ಹಳೇ ನೆನಪು
ಪತಿ ಅಂಬರೀಷ್ ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದ ಸುಮಲತಾ ಅವರನ್ನು ನಗಿಸಲು ಪುತ್ರ ಅಭಿಷೇಕ್ ಹಳೆಯ ನೆನಪೊಂದನ್ನು ಹಂಚಿಕೊಂಡರು. ನನಗೆ ಮೂರು ವರ್ಷವಿದ್ದಾಗ ಅಪ್ಪ-ಅಮ್ಮ ಜೊತೆ ಸಿಂಗಾಪುರಕ್ಕೆ ಹೋಗಿದ್ದೆ. ಅಪ್ಪ ಸಿಂಗಾಪುರಕ್ಕೆ ಹೋದರೂ ಅವರಿಗೆ ಊರಿನ ರೀತಿ ಇರಬೇಕು. ಹೊಟೇಲ್ ಕೊಠಡಿಯಲ್ಲಿ ದೇಸಿ ಆಹಾರ ಇಡ್ಲಿ, ಉಪ್ಪಿಟ್ಟು, ದೋಸೆ ತಿನ್ನುತ್ತಿದ್ದರು. ಆದರೆ ಅಮ್ಮನಿಗೆ ಹೊರಗೆ ಶಾಪಿಂಗ್ ಹೋಗುವುದಕ್ಕೆ ಇಷ್ಟವಿತ್ತು.
ನಾನು ಅಪ್ಪ ನಿದ್ದೆಯಿಂದ ಏಳುವ ಮೊದಲು ಟಿವಿ ಮೇಲೆ ಶಾಪಿಂಗ್ ಹೋದೆ ಎಂದು ಬರೆದು ಹೋಗಿದ್ದರು. ಆಗ ನಾನು ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಏನಾಯಿತು ಅಂತ ಕೇಳಿದರು. ನಾನು, ಟಾಯ್ಲೆಟ್‌ಗೆ ಹೋಗಬೇಕು ಎಂದು ಹೇಳಿದೆ. ಆಗ ಕರೆದುಕೊಂಡು ಹೋಗಿ ಸರಿ ಮಾಡು ಅಂದರು. ಸ್ವಲ್ಪ ಸಮಯದ ಬಳಿಕ ಮತ್ತೆ ಅಳುವುದಕ್ಕೆ ಶುರು ಮಾಡಿದೆ. ಅದಕ್ಕೆ ಅವರು ಏನು ಅಂದರು. ನಾನು, ಹಲ್ಲು ಉಜ್ಜು ಎಂದು ಹೇಳಿದೆ. ಆಗ ಹಲ್ಲು ಉಜ್ಜಿ ಇಷ್ಟೇನಾ ಎಂದು ಕೇಳಿದ್ದರು ಎಂದು ಅಭಿಷೇಕ್ ನುಡಿದರು.







