ಮಂಗಳೂರು ವಿಮಾನ ನಿಲ್ದಾಣ ಖಾಸಗಿಯವರಿಗೆ ನೀಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ವಿರೋಧ: ಸಚಿವ ಯು.ಟಿ.ಖಾದರ್

ಮಂಗಳೂರು, ನ. 30: ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣದ ಬಗ್ಗೆ ರಾಜ್ಯ ಸರಕಾರದ ಬಳಿ ಯಾವುದೇ ಅಭಿಪ್ರಾಯವನ್ನು ಪಡೆಯದೆ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ವಿರೋಧಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ರಾಜ್ಯ ಸರಕಾರ ಸಾಕಷ್ಟು ಹಣ ವಿನಿಯೋಗಿಸುತ್ತಾ ಬಂದಿದೆ. ಇದೀಗ ಕೇಂದ್ರ ಸರಕಾರ ರಾಜ್ಯ ಸರಕಾರದ ಬಳಿ ಯಾವ ಅಭಿಪ್ರಾಯವನ್ನು ಪಡೆದಿಲ್ಲ. ಸಚಿವ ಸಂಪುಟದಲ್ಲೂ ಚರ್ಚೆ ಆಗಿಲ್ಲ. ಏಕಾ ಏಕಿ ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಲ್ಲ. ಇದರಿಂದ ವಿಮಾನ ನಿಲ್ದಾಣದ ಕಾರ್ಮಿಕರಿಗೆ ಅತಂತ್ರ ಸ್ಥಿತಿ ಉಂಟಾಗಬಹುದು ಎಂದರು.
ಕೇಂದ್ರ ವಿಮಾನಯಾನ ಸಚಿವಾಲಯ ಇರುವಾಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಚಿವಾಲಯದ ಮೂಲಕ ಕ್ರಮಕೈಗೊಳ್ಳುವ ಬದಲು ಖಾಸಗಿಯವರಿಗೆ ನೀಡಲು ಹೊರಟಿರುವುದು ಯಾರ ಲಾಭಕ್ಕಾಗಿ ಎನ್ನುವುದನ್ನು ರಾಜ್ಯದ ಜನತೆಗೆ ಕೇಂದ್ರ ಸರಕಾರ ಉತ್ತರ ನೀಡಬೇಕಾಗಿದೆ. ಬಾಯಲ್ಲಿ ಸ್ವದೇಶ ಕಾರ್ಯದಲ್ಲಿ ವಿದೇಶಿ ಮಂತ್ರ ಜಪಿಸುತ್ತಿರುವವರು ಈ ರೀತಿಯ ಹೆಜ್ಜೆ ಇಡುತ್ತಿದ್ದಾರೆ. ಕೇರಳದ ವಿಮಾನ ನಿಲ್ದಾಣವನ್ನು ಈ ರೀತಿ ಖಾಸಗೀಕರಣಗೊಳಿಸಲು ಹೊರಟಿದ್ದ ಕೇಂದ್ರ ಸರಕಾರ ಅದನ್ನು ಕೈಬಿಟ್ಟು ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿಯವರ ಕೈಗೆ ನೀಡಲು ಹೊರಟಿರುವುದೇಕೆ ಎನ್ನುವುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕಾಗಿದೆ. ಈ ಬಗ್ಗೆ ಸ್ಥಳೀಯ ಸಂಸದರು ಸಂಸತ್‌ನಲ್ಲಿ ಜಿಲ್ಲೆಯ ಜನತೆಯ ಅಭಿಪ್ರಾಯವನ್ನು ತಿಳಿಸಬೇಕಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅಕ್ರಮ ಕಟ್ಟಡ ನಿರ್ಮಾಣ ಮಾಲಕನ ಜೊತೆ ಪರವಾನಿಗೆ ನೀಡಿದ ಅಧಿಕಾರಿಯ ಮೇಲೂ ಕಾನೂನು ಕ್ರಮ
ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದು ಅಕ್ರಮವಾಗಿ ಕಟ್ಟಡ ನಿರ್ಮಿಸುವ ಮಾಲಕರ ಜೊತೆ ಕಟ್ಟಡ ನಿರ್ಮಿಸಲು ಪರವಾನಿಗೆ ನೀಡುವ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಯೋಜನೆಯ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪ್ರಾಕೃತಿಕ ವಿಪತ್ತಿನಿಂದ ಮನೆ ಕಳೆದುಕೊಂಡ 840 ಕುಟುಂಬಗಳಿಗೆ ಮನೆ
ಪ್ರಾಕೃತಿಕ ವಿಪತ್ತಿನಿಂದ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 840 ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ಸರಕಾರ ಅನುದಾನ ನೀಡಲು ತಿರ್ಮಾನಿಸಿದೆ. ಅಲ್ಲಿನ ಚರಂಡಿ, ನೀರು ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರಕಾರ ಈಗಾಗಲೆ 32 ಕೊಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಸರಕಾರ ಎರಡು ಬೆಡ್ ರೂಂನ ಮನೆಯನ್ನು 9.45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿದೆ. ಮನೆ ನಿರ್ಮಿಸಲು ಏಳು ಪ್ರದೇಶಗಳನ್ನು ಆಯ್ಕೆ ಮಾಡಲಾಗಿದ್ದು, 4 ಕಡೆ ಪ್ರಾರಂಭಿಸಲಾಗುವುದು. ಮನೆ ನಿರ್ಮಿಸಲು ಏಳು ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಈ ಮಾದರಿಯಲ್ಲಿ ರಾಜೀವ ಗಾಂಧಿ ವಸತಿ ಯೋಜನೆಯ ಮನೆಯೂ ಸೇರಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಡಿಕೇರಿ- ಸಂಪಾಜೆ -ಸುಳ್ಯ ರಸ್ತೆ ಶೀಘ್ರ ನಿರ್ಮಾಣ
ಮಡಿಕೇರಿ -ಸಂಪಾಜೆ-ಸುಳ್ಯ ನಡುವಿನ ರಸ್ತೆಯನ್ನು ಶಿಘ್ರವಾಗಿ ನಿರ್ಮಿಸುವ ಕೆಲಸ ಭರದಿಂದ ಸಾಗುತ್ತಿದೆ. ಶೀಘ್ರದಲ್ಲಿ ಸಂಪರ್ಕ ರಸ್ತೆ ಪೂರ್ಣಗೊಳ್ಳಬಹುದು. ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಅನುದಾನದ ಕೋರಿಕೆ ಸಲ್ಲಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ 10ಸಾವಿರ ರೂ. ಬಾಡಿಗೆಯನ್ನು ಸರಕಾರದ ವತಿಯಿಂದ ನೀಡುವ ಯೋಜನೆಗೆ ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಪೊಲೀಸರಿಗೆ 1ಲಕ್ಷ ರೂ. ಬಹುಮಾನ
ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಗ್ಯಾಂಗ್ ರೇಫ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿ ಆರೊಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನವನ್ನು ನಾಗರಿಕರ ಪರವಾಗಿ ನೀಡುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ ಮತ್ತು ಪೊಲೀಸ್ ಕಮೀಷನರ್ ಸುರೇಶ್‌ರವರ ಮೂಲಕ 1ಲಕ್ಷ ಚೆಕ್ಕನ್ನು ಪೊಲೀಸರಿಗೆ ಇಂದು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಸಂತ್ರಸ್ತೆಗೆ ಸರಕಾರದಿಂದ 4.12 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮುಂದಿನ ಹಂತದಲ್ಲಿ ಪೂರ್ಣ ಪರಿಹಾರವನ್ನು ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್ ಕೆ.ಎಂ., ಎ.ಎಸ್.ಯು ಉಮೇಶ್ ಕುಮಾರ್, ಎ.ಸಿ.ಪಿ. ಮಂಜುನಾಥ ಶೆಟ್ಟಿ, ಡಿಸಿಪಿ ಹನುಮಂತರಾಯ, ಉಮಾ ಪ್ರಶಾಂತ್ ಮತ್ತು ಪೊಲೀಸ್ ಕಮಿಷರ್ ಟಿ.ಆರ್.ಸುರೇಶ್ ಅವರ ತಂಡವನ್ನು ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ, ಈಶ್ವರ ಉಳ್ಳಾಲ, ನೂರುದ್ಧೀನ್ ಸಾಲ್ಮರ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.