ಸೌದಿ ನೇತೃತ್ವದ ಮಿತ್ರಪಡೆಗೆ ಅಮೆರಿಕದ ಬೆಂಬಲ ಹಿಂದೆಗೆತ: ನಿರ್ಣಯ ಸೆನೆಟ್‌ನಲ್ಲಿ ಅಂಗೀಕಾರ
ವಾಶಿಂಗ್ಟನ್, ನ. 30: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಕೊಲೆ ಪ್ರಕರಣವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಭಾಯಿಸುತ್ತಿರುವ ರೀತಿಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ರಿಪಬ್ಲಿಕನ್ ನಿಯಂತ್ರಣದ ಅಮೆರಿಕ ಸೆನೆಟ್, ಯಮನ್‌ನಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ಹಿಂದಕ್ಕೆ ಪಡೆಯಲು ಮುಂದಾಗಿದೆ.
ಇದಕ್ಕೆ ಸಂಬಂಧಿಸಿದ ನಿರ್ಣಯವೊಂದನ್ನು ಸದನವು ಗುರುವಾರ 63-37 ಮತಗಳ ಅಂತರದಿಂದ ಅಂಗೀಕರಿಸಿತು. ಖಶೋಗಿ ಹತ್ಯೆಯಲ್ಲಿ ಸೌದಿ ಅರೇಬಿಯದ ಯುವರಾಜದ ಮುಹಮ್ಮದ್ ಬಿನ್ ಸಲ್ಮಾನ್ ವಹಿಸಿರುವ ಪಾತ್ರವನ್ನು ಉಪೇಕ್ಷಿಸಲು ಟ್ರಂಪ್ ತೆಗೆದುಕೊಂಡಿರುವ ನಿರ್ಧಾರದಿಂದ ಹತಾಶರಾಗಿರುವ ಕೆಲವು ಟ್ರಂಪ್ ಆಪ್ತ ರಿಪಬ್ಲಿಕನ್ನರೂ ನಿರ್ಣಯದ ಪರವಾಗಿ ಮತ ಹಾಕಿದ್ದಾರೆ.
‘‘ನಾನು ಮನಸ್ಸು ಬದಲಾಯಿಸಿದೆ, ಯಾಕೆಂದರೆ, ನನ್ನ ಭಾವನೆಗಳಿಗೆ ಆಘಾತವಾಗಿದೆ’’ ಎಂದು ಟ್ರಂಪ್‌ಗೆ ಆಪ್ತರಾಗಿರುವ ರಿಪಬ್ಲಿಕನ್ ಸೆನೆಟರ್‌ಲಿಂಡ್ಸೆ ಗ್ರಹಾಂ ಹೇಳಿದರು. ಅವರು ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು, ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಲು ಅವರು ನಿರ್ಧರಿಸಿದ್ದರು. ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಮುಚ್ಚಿದ ಬಾಗಿಲ ಸಭೆಯಲ್ಲಿ ಸೆನೆಟರ್‌ಗಳ ಮನವೊಲಿಸಲು ವಿಫಲ ಪ್ರಯತ್ನ ಮಾಡಿದ ಬಳಿಕ ಮತದಾನ ನಡೆಯಿತು.