ಉಡುಪಿ ಜಿಪಂ ಸಾಮಾನ್ಯ ಸಭೆ: ಜಿಲ್ಲಾಡಳಿತದಿಂದ ಜಿಪಂ ನಿರ್ಲಕ್ಷ, ಕಡೆಗಣನೆ ಆರೋಪ
ಆಡಳಿತ ಪಕ್ಷದ ಸದಸ್ಯರ ಸಭಾತ್ಯಾಗ; ಸಭೆ ಅನಿರ್ಧಿಷ್ಟಾವಧಿ ಮುಂದೂಡಿಕೆ

ಉಡುಪಿ, ನ.30: ಜಿಲ್ಲೆಯನ್ನು ಕಾಡುತ್ತಿರುವ ಮರಳು ಸಮಸ್ಯೆ, ಟೋಲ್‌ಗೇಟ್ ಸಮಸ್ಯೆಯನ್ನು ಪರಿಹರಿಸದೇ ಜಿಪಂ ಸಾಮಾನ್ಯ ಸಭೆಯನ್ನು ನಡೆಸುವು ದರಲ್ಲಿ ಯಾವುದೇ ಅರ್ಥವಿಲ್ಲ, ಇದಕ್ಕಾಗಿ ಜಿಲ್ಲಾಡಳಿತ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಅಲ್ಲದೇ ಜಿಪಂನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು ಕಡೆಗಣಿಸಿ, ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಇಂದು ಸಭಾತ್ಯಾಗ ಮಾಡುವ ಮೂಲಕ ಉಡುಪಿ ಜಿಪಂನ 14ನೇ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಅಧ್ಯಕ್ಷ ದಿನಕರಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಕೋರಂನ ಕೊರತೆಯಿಂದ ಅರ್ಧಗಂಟೆ ಕಾಲ ತಡವಾಗಿ ಪ್ರಾರಂಭಗೊಂಡಿತು. 39 ಸದಸ್ಯರ ಜಿಪಂನಲ್ಲಿ ಕೋರಂಗೆ 20 ಸದಸ್ಯರು ಉಪಸ್ಥಿತರಿರಬೇಕಿದ್ದು, 11 ಗಂಟೆಗೆ ಕೇವಲ 15 ಮಂದಿ ಮಾತ್ರ ಸಭೆಯಲ್ಲಿದ್ದರು. 10ನಿಮಿಷಗಳ ಬಳಿಕ ಇನ್ನಿಬ್ಬರು ಸದಸ್ಯರು ಸೇರಿಕೊಂಡರು. ಈ ಮಧ್ಯೆ ಜನಾರ್ದನ ತೋನ್ಸೆ ಸದನದ ನೀತಿ-ನಿಯಮಗಳ ಕುರಿತು ಎತ್ತಿದ ವಿಷಯದ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ 11:30ಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮೂವರು ಸದಸ್ಯರೊಂದಿಗೆ ಆಗಮಿಸುವ ಮೂಲಕ ಸಭೆ ಪ್ರಾರಂಭಗೊಂಡಿತು.
ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವರಾದ ಜಾಫರ್ ಶರೀಫ್ ಹಾಗೂ ಅಂಬರೀಷ್ ನಿಧನಕ್ಕೆ ಸಭೆ ಒಂದು ನಿಮಿಷ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಅರ್ಪಿಸಿತು.
ಸರಕಾರಿ ಕಾರ್ಯಕ್ರಮಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಸರಕಾರ ಹೊರಡಿಸಿದ ಸುತ್ತೋಲೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ಸರಕಾರಿ ಕಾರ್ಯಕ್ರಮಗಳಲ್ಲಿ, ಗ್ರಾಪಂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದು, ಖಾಸಗಿ ಕಾರ್ಯಕ್ರಮಗಳು, ಮದುವೆ ಹಾಗೂ ಕಲ್ಯಾಣಮಂಟಪಗಳಲ್ಲಿ ಇವುಗಳ ಬಳಕೆಯನ್ನು ನಿಲ್ಲಿಸಬೇಕೆಂದು ಸದಸ್ಯರು ಸಲಹೆ ನೀಡಿದರು.ಈ ಬಗ್ಗೆ ಖಾಸಗಿ ಕಲ್ಯಾಣಮಂಟಪ, ಸಭಾಭವನಗಳ ಮಾಲಕರ ಸಭೆಯನ್ನು ಕರೆಸಿ ಈ ಬಗ್ಗೆ ಅವರಿಗೆ ಮಾಹಿತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು.
ವಿಪಕ್ಷ ನಾಯಕ ಜನಾರ್ದನ ತೋನ್ಸೆ ಅವರು ಟೋಲ್‌ಗೇಟ್‌ಗೆ ಸಂಬಂಧಿಸಿದಂತೆ ಚರ್ಚಿಸಲು ನ.17ರಂದು ಕರೆದ ಸಭೆಯ ಫಲಿತಾಂಶದ ಕುರಿತು ಪ್ರಶ್ನಿಸಿದರು. ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯ ಬಗ್ಗೆಯೂ ವಿಚಾರಿಸಿದರು. ಈ ಬಗ್ಗೆ ಬಿರುಸಿನ ಚರ್ಚೆ ನಡೆದು, ಕಂಪೆನಿ ಪರವಾಗಿ ಉತ್ತರಿಸಲು ಆಗಮಿಸಿದ ಅಧಿಕಾರಿಗಳ ಮೇಲೆ ಸದಸ್ಯರು ಕೆಂಡ ಕಾರಿದರು.
ಜಿಲ್ಲೆಯ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳಲ್ಲಿ ಕಳೆದ ನ.26ರಿಂದ ಸ್ಥಳೀಯ ವಾಹನಗಳಿಂದಲೂ ಟೋಲ್ ಸಂಗ್ರಹಿಸಲು ನವಯುಗ ಮುಂದಾಗಿರುವುದನ್ನು ಹಾಗೂ ಇದನ್ನು ಪ್ರತಿಭಟಿಸಲು ಮುಂದಾದ ಸ್ಥಳೀಯರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿದರು.
ಈ ಹಂತದಲ್ಲಿ ಕಾಂಗ್ರೆಸ್‌ನ ವಿಲ್ಫ್ರೇಡ್ ರಾಡ್ರಿಗಸ್ ಅವರು, ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳನ್ನು ದೂರುವುದರ ಬದಲು, ರಾಷ್ಟ್ರೀಯ ಹೆದ್ದಾರಿ ನಿಗಮ ಹಾಗೂ ನವಯುಗ ಕಂಪೆನಿಯ ನಡುವೆ ಆದ ಒಪ್ಪಂದದ ವಿವರಗಳನ್ನು ಪಡೆದು, ಈ ಬಗ್ಗೆ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಈ ಹಂತದಲ್ಲಿ ಬಿಜೆಪಿಯ ಪ್ರತಾಪ್ ಹೆಗ್ಡೆ ಮಾರಾಳಿ ಅವರು ಮರಳಿನ ವಿಷಯ ಪ್ರಸ್ತಾಪಿಸಿ, ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಟೋಲ್‌ಗೇಟ್ ಹಾಗೂ ಮರಳು ಸಮಸ್ಯೆಗಳು ಪರಿಹಾರವಾಗದೇ ಉಳಿದಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಸಮಸ್ಯೆ ಇತ್ಯರ್ಥಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು. ಇದು ಪರಿಹಾರವಾಗದೇ ಜಿಪಂ ಸಾಮಾನ್ಯ ಸಭೆಗೆ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಇದೀಗ ಸಾಮಾನ್ಯ ಸಭೆ ನಡೆಯಲು ನಿರ್ಧಾರವಾದ ಸಮಯದಲ್ಲೇ ಪಕ್ಕದ ಸಭಾಂಗಣ ದಲ್ಲೇ ಜಿಲ್ಲಾ ಉಸ್ತುವಾರಿ ಸಚಿವೆಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯನ್ನು ಇಟ್ಟುಕೊಳ್ಳಲಾಗಿದೆ. ಈ ಮೂಲಕ ನಮಗೆ ಅದರಲ್ಲಿ ಭಾಗವಹಿಸಲು ಅವಕಾಶ ಇಲ್ಲದಂತೆ ಮಾಡಲಾಗಿದೆ ಎಂದು ದೂರಿದರು.
ಇದು ಜಿಪಂಗೆ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ಮಾಡಿದ ಅವಮಾನ. ಮೊದಲಿನಿಂದ ಅವರು ಜಿಪಂನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಅಲ್ಲದೇ ಅವರು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸುತಿದ್ದಾರೆ. ಈ ಸಮಸ್ಯೆಗಳೆಲ್ಲಾ ಬಗೆಹರಿಯದೇ ಸಾಮಾನ್ಯ ಸಭೆ ನಡೆಸುವ ಅಗತ್ಯವಿಲ್ಲ ಎಂದು ಪ್ರತಾಪ್ ಹೇಳಿದರು.
ಇದಕ್ಕೆ ಬಿಜೆಪಿಯ ಉಳಿದ ಸದಸ್ಯರಾದ ರೇಶ್ಮಾ ಉದಯಕುಮಾರ್ ಶೆಟ್ಟಿ, ಜ್ಯೋತಿ ಹರೀಶ್, ದಿವ್ಯಾ ಗಿರೇಶ್, ಸುರೇಶ್ ಬಂಟ್ವಾಡಿ, ರಾಘವೇಂದ್ರ ಕಾಂಚನ್ ಮುಂತಾದವರೊಂದಿಗೆ ಅಧ್ಯಕ್ಷಕರೂ ಧ್ವನಿಗೂಡಿಸಿ, ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ಸಿಗುತ್ತಿಲ್ಲ. ನಮ್ಮೆಲ್ಲಾ ಸಮಸ್ಯೆಗಳು ಇತ್ಯರ್ಥಗೊಳ್ಳುವ ವರೆಗೆ ಸಭೆಯೇ ಬೇಡ. ಈಗ ನಾವು ಸಭಾತ್ಯಾಗ ಮಾಡೋಣ ಎಂದು ಹೇಳಿ ಒಬ್ಬೊಬ್ಬರೇ ಹೊರ ನಡೆಯತೊಡಗಿದರು.
ಮೊದಲು ಕೆಳಗಿದ್ದ ಎಲ್ಲಾ ಸದಸ್ಯರು ತೆರಳಿದ ಬಳಿಕ ವೇದಿಕೆ ಮೇಲಿದ್ದ ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರೂ ಎದ್ದು ಹೊರ ನಡೆದರು. ಸ್ವಲ್ಪ ಸಮಯದ ಬಳಿಕ ಸಭೆಯನ್ನು ಮುಂದೂಡದೇ ಅದ್ಯಕ್ಷರೂ ಎದ್ದು ಹೊರನಡೆದು ಸದಸ್ಯರನ್ನು ಮನ ಒಲಿಸುವ ಪ್ರಯತ್ನ ನಡೆಸಿದರು. ಅರ್ಧಗಂಟೆ ಪ್ರಯತ್ನದ ಬಳಿಕ ಮರಳಿ ಬಂದ ಅವರು 12:45ಕ್ಕೆ ಸಭೆಯನ್ನು ಅನಿರ್ಧಿಷ್ಠವಧಿಗೆ ಮುಂದೂಡುವ ನಿರ್ಧಾರ ಪ್ರಕಟಿಸಿ ತೆರಳಿದರು.
ಸಭೆಯಲ್ಲಿ ಹೊಸ ಮುಖ್ಯ ಕಾರ್ಯನಿರ್ವಹಣಾಧಕಾರಿ ಸಿಂಧೂ ಬಿ.ರೂಪೇಶ್, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಎಸ್.ಕೋಟ್ಯಾನ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.