ಬಿಜೆಪಿಯವರು ಗಾಂಧೀಜಿಯನ್ನು ಕೊಂದ ಗಿರಾಕಿಗಳ ವಂಶದವರು: ಸಿದ್ದರಾಮಯ್ಯ

ಬೆಂಗಳೂರು, ನ.30: ಬಿಜೆಪಿಯವರು ರಾಷ್ಟ್ರಪತಿ ಮಹಾತ್ಮಗಾಂಧೀಜಿಯನ್ನು ಕೊಂದ ಗಿರಾಕಿಗಳ ವಂಶದವರು. ಹೀಗಿದ್ದರೂ ಗೋ ಹತ್ಯೆ ನಿಲ್ಲಿಸುವುದು, ಗೋವುಗಳ ರಕ್ಷಣೆ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗೋವುಗಳ ರಕ್ಷಣೆ ಬಗ್ಗೆ ಮಾತನಾಡುವವರು ತಮ್ಮ ಜೀವನದಲ್ಲಿ ಒಮ್ಮೆಯೂ ಗೋವುಗಳ ಸೆಗಣಿ ಎತ್ತಿರುವುದಿಲ್ಲ, ಕಸವನ್ನು ಸ್ವಚ್ಛಗೊಳಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಗೋವುಗಳ ಸೆಗಣಿ ಎತ್ತಿದ್ದೇನೆ, ಕಸ ಸ್ವಚ್ಛಗೊಳಿಸಿದ್ದೇನೆ. ಮೇಲ್ವರ್ಗದವರು ಎಂದಾದರೂ ಸೆಗಣಿ ಎತ್ತಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವೇದಿಕೆ ಮೇಲಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಾಧ್ಯಕ್ಷ ಬಿ.ಎಲ್.ಶಂಕರ್‌ರನ್ನು ನೋಡಿ ನೀವೇನಾದರೂ ಸೆಗಣಿ ಎತ್ತಿದ್ದೀರಾ ಎಂದು ಮರು ಪ್ರಶ್ನೆ ಹಾಕಿದರು. ಅವರಿಬ್ಬರು ಇಲ್ಲ ಎಂದು ಉತ್ತರಿಸಿದರು.
ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅದರ ಅರ್ಥ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಗೆ ಅವರ ಬೆಂಬಲವೂ ಇದೇ ಅಂತಾನೆ ಅಲ್ಲವೇ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂವಿಧಾನ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಸ್ವಾರ್ಥಕ್ಕಾಗಿ ಏನಾದರೂ ಓದಿಕೊಂಡಿರಬಹುದು. ಬಿಜೆಪಿಯವರು ಮೊದಲ ದಿನದಿಂದಲೇ ಸಂವಿಧಾನವನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಅವರಿಂದ ಸಂವಿಧಾನದ ರಕ್ಷಣೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.







