ಭಗತ್ ಸಿಂಗ್ ರನ್ನು ‘ಭಯೋತ್ಪಾದಕ’ ಎಂದ ಪ್ರಾಧ್ಯಾಪಕನ ಅಮಾನತು
ಹೊಸದಿಲ್ಲಿ, ನ. 30: ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರನ್ನು ‘ಭಯೋತ್ಪಾದಕ’ ಎಂದು ಉಲ್ಲೇಖಿಸಿದ ಜಮ್ಮು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಅಮಾನತು ಮಾಡಲಾಗಿದೆ.
ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಮುಹಮ್ಮದ್ ತಾಜುದ್ದೀನ್ ಈ ಹೇಳಿಕೆ ನೀಡಿದ್ದಾರೆ.
ಭಗತ್ ಸಿಂಗ್ ಅವರನ್ನು ನಾವು ನಾಯಕನನ್ನಾಗಿ ಮಾಡಿದ್ದೇವೆ. ಆದರೆ, ಅವರನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಗೆ ಅಸಮಾಧಾನಗೊಂಡ ವಿದ್ಯಾರ್ಥಿಗಳು ಪ್ರಾದ್ಯಾಪಕ ತಾಜುದ್ದಿನ್ ವಿರುದ್ಧ ದೂರು ದಾಖಲಿಸಿದ್ದಾರೆ. ತಾಜುದ್ದೀನ್ ತಮ್ಮ ಭಾವನೆಗಳಿಗೆ ಆಘಾತ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಜುದ್ದೀನ್ ಕ್ಷಮೆ ಕೋರಿದ್ದರು.
ವಿಚಾರಣಾ ಸಮಿತಿ ರಚನೆ
ತಾಜುದ್ದೀನ್ ಭಗತ್ ಸಿಂಗ್ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ತನಿಖೆ ನಡೆಸಲು ಜಮ್ಮು ವಿಶ್ವವಿದ್ಯಾನಿಲಯ ಗುರುವಾರ ಆದೇಶಿಸಿದೆ. ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ತಾಜುದ್ದೀನ್ ಅವರು ನೀಡಿದ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಲು 6 ಸದಸ್ಯರ ಸಮಿತಿ ರೂಪಿಸಲಾಗಿದೆ ಎಂದು ಉಪ ಕುಲಪತಿ ಮನೋಜ್ ಕೆ. ಧಾರ್ ತಿಳಿಸಿದ್ದಾರೆ.