ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ: ಸಚಿವೆ ಜಯಮಾಲಾ
28 ಸಾಧಕರು, 4 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಉಡುಪಿ, ನ.30: ಉಡುಪಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳ 28 ಸಾಧಕರು ಹಾಗೂ ನಾಲ್ಕು ಸಂಘ ಸಂಸ್ಥೆಗಳಿಗೆ 2018ನೆ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಶುಕ್ರವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಕರ್ನಾಟಕ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಶಕ್ತಿ ನಮಗೆ ಅರಿವಿಗೆ ಬಂದಿದೆ. ಈ ಬಾರಿ ಅತ್ಯಂತ ಹೆಚ್ಚು ಸಾಧಕರನ್ನು ಆಯ್ಕೆ ಮಾಡಿರುವುದು ಉಡುಪಿ ಜಿಲ್ಲೆ ಯಿಂದ. ಈ ಸಾಧಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಮಹತ್ವವನ್ನು ಕಂಡುಕೊಂಡೆ ಎಂದರು.
ಈ ಬಾರಿ ರಾಜ್ಯೋತ್ಸವಕ್ಕಾಗಿ ರಾಜ್ಯಾದ್ಯಂತದಿಂದ 2000 ಅರ್ಜಿಗಳು ಬಂದಿದ್ದು, ಅದನ್ನು 63ಕ್ಕೆ ಇಳಿಸುವುದು ಎಲ್ಲರಿಂದ ನಿಷ್ಠುರ ಕಟ್ಟಿಕೊಳ್ಳುವ ಪರಿಸ್ಥಿತಿ ಆಗಿದೆ. ಆದರೆ ಇದರಲ್ಲಿ ಸಾಮಾಜಿಕ ನ್ಯಾಯ, ಪ್ರಾಂತೀಯ ನ್ಯಾಯದ ಜೊತೆಗೆ ಸಂವಿಧಾನಾತ್ಮಕವಾದ ನ್ಯಾಯ ನೀಡುವ ನಿಟ್ಟಿನಲ್ಲಿ ಮಹಿಳೆ, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ ಕೊಡಬೇಕಾಗುತ್ತದೆ. ಹೀಗಾಗಿ ಸಾಧಕರನ್ನು ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಯುವ ಜನತೆಗೆ ಶಿಕ್ಷಣದ ಜೊತೆ ಉದ್ಯೋಗ ನೀಡಿದರೆ ಅವರ ಬದುಕು ನೆಮ್ಮದಿಯಿಂದ ಸಾಗಲು ಸಾಧ್ಯವಾಗುತ್ತದೆ ಎಂದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ರಾಜ್ಯದ 11100 ಕಲಾ ತಂಡಗಳಿಗೆ ಅನುದಾನ ನೀಡಲಾಗುತ್ತದೆ. ಅದರಲ್ಲಿ ಪಾರಂಪರಿಕ ಕಲೆಗಳನ್ನು ಆಧಾರಿಸಿ ಬದುಕುತ್ತಿರುವ 100 ಮಂದಿ ತಿಂಗಳಿಗೆ 50 ಸಾವಿರ ರೂ. ಆದಾಯ ಪಡೆಯುವ ದಿನ ಬಂದಿದೆ. ಈ ರೀತಿ ಕಲೆ ಇನ್ನಷ್ಟು ಬೆಳೆಯಬೇಕು ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಜೊತೆ ನಗದು ನೀಡಿ: ಸಚಿವರ ಸಲಹೆ
ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಹಿರಿತನದಲ್ಲೂ ಅವರ ಸಾಧನೆಗಳು, ಬದುಕಿನಲ್ಲಿ ನೀಡಿದ ಸೇವೆಗಳು ಇನ್ನೊಬ್ಬರಿಗೆ ಪ್ರೇರಣಾಶಕ್ತಿ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಮುಂದಿನ ವರ್ಷದಿಂದ ಈ ಪ್ರಶಸ್ತಿ ಜೊತೆ ನಗದನ್ನು ಕೂಡ ಕೊಡಬೇಕು. ಇದು ಅವರ ಬದುಕಿಗೆ ನೆರವಾಗುತ್ತದೆ. ಎಲ್ಲವನ್ನು ರಾಜ್ಯ ಸರಕಾರ ಮಾಡಲು ಸಾಧ್ಯವಿಲ್ಲ. ಆ ಕಾರ್ಯವನ್ನು ಸ್ಥಳೀಯವಾಗಿ ಜಿಲ್ಲಾಡಳಿತ ಮಾಡಬೇಕು. ಸಾಧ್ಯತೆ ಇದ್ದರೆ ಜಿಲ್ಲಾಧಿಕಾರಿಗಳು ಆ ಬಗ್ಗೆ ಗಮನ ಕೊಡಬೇಕು ಎಂದು ಸಚಿವೆ ಜಯಮಾಲಾ ಸಲಹೆ ನೀಡಿದರು.