ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಪತ್ರಕರ್ತ ಪೊಲೀಸ್ ಕಸ್ಟಡಿಗೆ

ಕುಂದಾಪುರ, ನ.30: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧಿತನಾಗಿರುವ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ(40) ಎಂಬಾತನನ್ನು ಹೆಚ್ಚಿನ ತನಿಖೆಗಾಗಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯವು ಇಂದು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಯನ್ನು ನ. 29ರಂದು ಬೈಂದೂರು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಪೊಲೀಸರ ಮನವಿಯಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.
ಆರೋಪಿ ವಿರುದ್ಧ ನಿನ್ನೆಯವರೆಗೆ ಐವರು ಸಂತ್ರಸ್ತ ಬಾಲಕರು ನೀಡಿದ ದೂರಿನಂತೆ ಐದು ಪ್ರಕರಣಗಳು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇಂದು ಮತ್ತೆ ಐವರು ದೌರ್ಜನ್ಯಕ್ಕೆ ಒಳಗಾದ ಬಾಲಕರು ದೂರು ನೀಡಿದ್ದಾರೆ. ಅದರಂತೆ ಆರೋಪಿ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಬಾಲಕರು ದೂರು ನೀಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story