ಹಿಮಾಲಯದಲ್ಲಿ 8.5 ತೀವ್ರತೆಯ ಭೂಕಂಪ ಸಾಧ್ಯತೆ: ಅಧ್ಯಯನ
ಹೊಸದಿಲ್ಲಿ, ನ. 30: ಹಿಮಾಲಯದಲ್ಲಿ ಅಧಿಕ ತೀವ್ರತೆಯ ಭೂಕಂಪ ಸಂಭವಿಸಲಿದೆ ಎಂದು ವಿಜ್ಞಾನಿಗಳ ಎಚ್ಚರಿಕೆಗೆ ಭಾರತೀಯ ಸಂಶೋಧಕರ ಇನ್ನೊಂದು ಅಧ್ಯಯನ ಇನ್ನಷ್ಟು ಪುಷ್ಟಿ ನೀಡಿದೆ.
ಬೆಂಗಳೂರಿನ ಜವಾಹರ್‌ಲಾಲ್ ನೆಹರೂ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್‌ನ ಭೂಕಂಪ ಶಾಸ್ತ್ರಜ್ಞ ಸಿ.ಪಿ. ರಾಜೇಂದ್ರನ್ ನೇತೃತ್ವದ ನೂತನ ಅಧ್ಯಯನ, ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಹಿಮಾಲಯದಲ್ಲಿ 8.5 ಹಾಗೂ ಅಧಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಲಿದೆ ಎಂದು ಹೇಳಿದೆ.
‘ಜಿಯೋಲಾಜಿಕಲ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧಕರು, ಈಗಿರುವ ದತ್ತಾಂಶದೊಂದಿಗೆ ನೂತನವಾಗಿ ಸಂಶೋಧಿಸಲಾದ ಎರಡು ಸ್ಥಳಗಳಾದ ನೇಪಾಳದ ಮೋಹನ ಖೋಲಾ ಹಾಗೂ ಭಾರತೀಯ ಗಡಿ ರೇಖೆಯಲ್ಲಿರುವ ಚೋರ್ಗಾಲಿಯಾದ ದತ್ತಾಂಶಗಳನ್ನು ವಿಮರ್ಶಾತ್ಮಕವಾಗಿ ವೌಲ್ಯಮಾಪನ ಮಾಡಿದ್ದಾರೆ.
ಗೂಗಲ್ ಅರ್ಥ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕಾರ್ಟೋಸ್ಯಾಟ್-1 ಸೆಟಲೈಟ್ ಬಳಕೆಯೊಂದಿಗೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಪ್ರಕಟಿಸಿದ ಸ್ಥಳೀಯ ಭೂಗರ್ಭ ಶಾಸ್ತ್ರ ಹಾಗೂ ಸಂರಚನಾ ನಕ್ಷೆಯನ್ನು ಸಂಶೋಧಕರು ಈ ಅಧ್ಯಯನಕ್ಕೆ ಅನುಸರಿಸಿದ್ದಾರೆ.