ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.8.2ರಿಂದ ಶೇ.7.1ಕ್ಕೆ ಕುಸಿತ

ಹೊಸದಿಲ್ಲಿ, ನ.30: ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.8.2ರಷ್ಟಿದ್ದ ಜಿಡಿಪಿ ಪ್ರಗತಿ ದರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.1ಕ್ಕೆ ಕುಸಿದಿದೆ. ಹೆಚ್ಚಿನ ತೈಲಬೆಲೆಗಳು ಮತ್ತು ರೂಪಾಯಿ ಪತನ ಈ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಸೇರಿವೆ ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಪ್ರಗತಿ ದರ ಶೇ.6.3ರಷ್ಟಿತ್ತು ಎಂದು ಸಚಿವಾಲಯವು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿವೆ.
ಕಚ್ಚಾ ತೈಲ,ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳ ಉತ್ಪಾದನೆ ಕುಂಠಿತಗೊಂಡಿದ್ದರಿಂದ ಅಕ್ಟೋಬರ್‌ನಲ್ಲಿ ಎಂಟು ಮೂಲಸೌಕರ್ಯ ಕ್ಷೇತ್ರಗಳ ಬೆಳವಣಿಗೆ ದರ ಶೇ.4.8ಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಕ್ಷೇತ್ರಗಳು ಶೇ.5ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದವು.
ತನ್ಮಧ್ಯೆ ಎಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ವಿತ್ತೀಯ ಕೊರತೆಯು 6.49 ಲಕ್ಷ ಕೋಟಿ ರೂ. ಅಥವಾ ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಮುಂಗಡ ಪತ್ರ ಗುರಿಯ ಶೇ.103.9ರಷ್ಟಿತ್ತು ಎಂದೂ ಸಚಿವಾಲಯದ ಮಾಹಿತಿಯು ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ನಿವ್ವಳ ತೆರಿಗೆ ಸಂಗ್ರಹವು 6.61 ಲ.ಕೋ.ರೂ.ಗಳಾಗಿವೆ. 2018-19ನೇ ಹಣಕಾಸು ವರ್ಷಕ್ಕಾಗಿ ಜಿಡಿಪಿಯ ಶೇ.3.3ರ ತನ್ನ ವಿತ್ತೀಯ ಕೊರತೆ ಗುರಿಯನ್ನು ಸಾಧಿಸುವ ವಿಶ್ವಾಸವಿದೆ ಎಂದು ಸರಕಾರವು ತಿಳಿಸಿದೆ.







