ಕಳವು ಆರೋಪಿಗಳ ಬಂಧನ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ನ.30: ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿ ಅವುಗಳನ್ನು ಮೋರಿಯಲ್ಲಿ ಬಚ್ಚಿಟ್ಟು, ಕೆಲ ದಿನಗಳ ನಂತರ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿ, 30.97 ಲಕ್ಷ ರೂ. ಬೆಲೆಬಾಳುವ 1ಕೆಜಿ 19 ಗ್ರಾಂ ಚಿನ್ನಾಭರಣ, 900 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪೀಣ್ಯ 1ನೆ ಹಂತದ ಕಾಂತರಾಜ್ ಯಾನೆ ಮೋರಿ ಕಾಂತ(42) ಬಂಧಿತ ಆರೋಪಿ ಎಂದು ತಿಳಿಸಿದರು.
ಆರೋಪಿಯ ಬಂಧನದಿಂದ ಪೀಣ್ಯ ಠಾಣೆಯ ಎರಡು ಕನ್ನಗಳವು ಪ್ರಕರಣಗಳು, ಸೇರಿದಂತೆ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವನಾಗಿದ್ದು, ಮದುವೆಯಾದ ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದನು. ಈತ ಅಪಾರ್ಟ್‌ಮೆಂಟ್ ಹಾಗೂ ಮನೆಗಳಲ್ಲಿ ಕನ್ನಗಳವು ಮಾಡುವ ರೂಢಿಗತನಾಗಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಈ ಹಿಂದೆಯೂ ಸಹ ಆರೋಪಿಯು ರಾಜಗೋಪಾಲನಗರ, ಆರ್‌ಎಂಸಿ ಯಾರ್ಡ್, ಚಂದ್ರಾಲೇಔಟ್, ವಿಜಯನಗರ ಠಾಣೆಗಳ 10ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೆಲವು ಪ್ರಕರಣಗಳು ಖುಲಾಸೆಗೊಂಡಿದ್ದು, ಮೂರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಮೋರಿಯಲ್ಲಿ ಚಿನ್ನ: ಈತ ಒಮ್ಮೆ ಮನೆಗಳವು ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಬೆನ್ನಟ್ಟಿ ಹೋದಾಗ ಮೋರಿಯೊಂದರಲ್ಲಿ ಬಚ್ಚಿಟ್ಟುಕೊಂಡು ತಪ್ಪಿಸಿಕೊಂಡಿದ್ದನು. ಅಂದಿನಿಂದ ಆರೋಪಿ ತಾನು ಕಳವು ಮಾಡಿದ ಚಿನ್ನಾಭರಣ ಬಟ್ಟೆಯಲ್ಲಿ ಕಟ್ಟಿ ಮೋರಿಯಲ್ಲಿ ಬಚ್ಚಿಟ್ಟು ನಂತರ ಅವುಗಳನ್ನು ಮಾರಾಟ ಮಾಡುತ್ತಿದ್ದನು. ಮೋರಿಯಲ್ಲಿ ಆಭರಣ ಬಚ್ಚಿಟ್ಟರೆ ಯಾವುದೇ ಅಡೆತಡೆಗಳು ಬರುವುದಿಲ್ಲವೆಂಬ ನಂಬಿಕೆ ಈತನದ್ದಾಗಿತ್ತು. ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಯನ್ನು ಗುರುತಿಸಿ ರಾತ್ರಿ ಆ ಮನೆಗೆ ಹೋಗಿ ಹಣ-ಆಭರಣ ದೋಚುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿ ಬಳಿಕ ಚಿನ್ನಾಭರಣ ವಾರಸುದಾರರಿಗೆ ಮಾಲು ಹಿಂತಿರುಗಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಡಾ.ಬೋರಲಿಂಗಯ್ಯ ಸೇರಿದಂತೆ ಪ್ರಮುಖರಿದ್ದರು.
ಇನ್ನಿಬ್ಬರ ಸೆರೆ: ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಸೋಗಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ವೇಲೂರು ಜಿಲ್ಲೆಯ ಕಾರ್ತಿಕ್‌ಪುರ ನಿವಾಸಿ ಪಾಂಡಿಯನ್(27), ಅಣ್ಣಾಮಲೈ(25) ಬಂಧಿತರಾಗಿದ್ದು, ಇವರಿಂದ 569 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, 4 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.







