ಅರ್ಚಕರಿಗೆ ಜೀವ ಬೆದರಿಕೆ: ದೂರು ದಾಖಲು

ಮಂಗಳೂರು, ನ.30: ಇಲ್ಲಿನ ವಿ.ಟಿ.ರಸ್ತೆಯಲ್ಲಿರುವ ವಿಠೋಭ ರುಕುಮಾಯಿ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರಿಗೆ ವ್ಯಕ್ತಿಯೊಬ್ಬರು ಜೀವ ಬೆದರಿಕೆ ಒಡ್ಡಿದ ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ವರದರಾಯ ಪ್ರಭು ಎಂಬವರು ತನಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿರುವುದಲ್ಲದೆ, ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ಭಟ್ ದೂರಿನಲ್ಲಿ ತಿಳಿಸಿದ್ದಾರೆ.
ತಾನು 2010ರಿಂದ ವಿಠೋಭ ರುಕಮಾಯಿ ದೇವಸ್ಥಾನದಲ್ಲಿ ಅರ್ಚಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಅಂದಿನ ಆಡಳಿತ ಮೊಕ್ತೇಸರ ನಾಮದೇವ ಶೆಣೈಯವರು ತನ್ನನ್ನು ನೇಮಕ ಮಾಡಿದ್ದು, ಈಗಿನ ಆಡಳಿತ ಮೊಕ್ತೇಸರ ಮರೊಳಿ ಸುರೇಂದ್ರ ಕಾಮತರ ನಿರ್ದೇಶನದಂತೆ ದೇವಸ್ಥಾನದ ನಿತ್ಯ ಪೂಜಾ ವಿಧಿ ವಿಧಾನಗಳು ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ವರದರಾಯ ಪ್ರಭು ಪ್ರತಿನಿತ್ಯ ದೇವಸ್ಥಾನಕ್ಕೆ ಬಂದು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನ.29ರಂದು ಪೂರ್ವಾಹ್ನ 10 ಗಂಟೆಗೆ ದೇವಸ್ಥಾನಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವರಾಂಡದಲ್ಲಿ ನಿಲ್ಲಿಸಿದ್ದ ತನ್ನ ಕಾರಿನ ಗಾಳಿ ತೆಗೆದು, ‘ಇದು ಆರಂಭ ಇನ್ನು ನಿನ್ನನ್ನು ಬಿಡುವುದಿಲ್ಲ’ ಎಂದು ನಿಂದಿಸಿ ಹೋಗಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯ ಭಟ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಮಂಗಳೂರು ನಗರ ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.