ಆರ್‌ಬಿಐನ ಹೆಚ್ಚುವರಿ ಬಂಡವಾಳ ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ ಬಳಕೆಯಾಗಬೇಕು: ಮಾಜಿ ಸಿಇಎ ಅರವಿಂದ ಸುಬ್ರಮಣಿಯನ್

ಹೊಸದಿಲ್ಲಿ, ನ.30: ಆರ್‌ಬಿಐನ ಮೀಸಲು ಬಂಡವಾಳದ ಬಳಕೆಯ ಕುರಿತು ಸರಕಾರದೊಂದಿಗೆ ಹಗ್ಗಜಗ್ಗಾಟದ ನಡುವೆಯೇ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ(ಸಿಇಎ) ಅರವಿಂದ ಸುಬ್ರಮಣಿಯನ್ ಅವರು,ಆರ್‌ಬಿಐ 4.5-7 ಲ.ಕೋ.ರೂ.ಹೆಚ್ಚುವರಿ ಬಂಡವಾಳವನ್ನು ಹೊಂದಿದ್ದು,ಇದನ್ನು ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ ಬಳಸಬೇಕು ಎಂದು ಹೇಳುವ ಮೂಲಕ ಸರಕಾರದ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ.
ಆದರೆ ಬಂಡವಾಳ ನಿಯೋಜನೆಯ ನಿರ್ಧಾರ ಆರ್‌ಬಿಐಗೆ ಬಿಟ್ಟಿದ್ದಾಗಿದೆ ಮತ್ತು ಅದು ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ ಸ್ವಯಂಇಚ್ಛೆಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ತನ್ನ ಈ ಸಲಹೆಯು ಆರ್‌ಬಿಐಗೆ ವಾಸ್ತವದಲ್ಲಿ ತನ್ನ ಬಳಿಯಿರುವ ಎಲ್ಲ ಬಂಡವಾಳದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿರುವ ಆರ್‌ಬಿಐನ ಎಲ್ಲ ಗಣ್ಯ ಹಾಲಿ ಮತ್ತು ಮಾಜಿ ಅಧಿಕಾರಿಗಳ ನಿಲುವಿಗೆ ವಿರುದ್ಧವಾಗಿದೆ ಎನ್ನುವುದು ತನಗೆ ಗೊತ್ತು ಎಂದಿರುವ ಸುಬ್ರಮಣಿಯನ್,ಆದರೆ ಅವರು ತಪ್ಪು ಧೋರಣೆಯನ್ನು ಹೊಂದಿದ್ದಾರೆ ಎಂದಿದ್ದಾರೆ.
ಬ್ಯಾಂಕುಗಳನ್ನು ಬಲಿಷ್ಠಗೊಳಿಸಲು ಹೆಚ್ಚಿನ ಹಣದ ಅಗತ್ಯವಿದೆ. ಇದಕ್ಕಾಗಿ ಈಗಾಗಲೇ ವ್ಯಯಿಸಿರುವ ಹಣದ ಜೊತೆಗೆ ಇನ್ನೂ 3ರಿಂದ 5 ಲ.ಕೋ.ರೂ.ಗಳು ಸರಕಾರಕ್ಕೆ ಅಗತ್ಯವಾಗಬಹುದು ಎಂದು ಅವರು ತನ್ನ ಮುಂಬರುವ ಕೃತಿ ‘ ಆಫ್ ಕೌನ್ಸೆಲ್:ದಿ ಚಾಲೆಂಜಸ್ ಆಫ್ ಮೋದಿ-ಜೇಟ್ಲಿ ಇಕಾನಮಿ’ಯಲ್ಲಿ ಹೇಳಿದ್ದಾರೆ.
ನಮ್ಮ ಆಂತರಿಕ ವಿಶ್ಲೇಷಣೆಯನ್ನು ಆಧರಿಸಿರುವ ರೂಢಿಗತ ಅಂದಾಜುಗಳು ಮತ್ತು ಇತರ ದೇಶಗಳೊಂದಿಗೆ ಹೋಲಿಕೆಯು ತನಗೆ ಎಷ್ಟು ಬಂಡವಾಳದ ಅಗತ್ಯವಿದೆ ಎನ್ನುವುದನ್ನು ನಿರ್ಧರಿಸಲು ಆರ್‌ಬಿಐ ವಿಶ್ವದ ಹೆಚ್ಚಿನ ಕೇಂದ್ರಬ್ಯಾಂಕುಗಳು ಅನುಸರಿಸುತ್ತಿರುವ ಪದ್ಧತಿಯನ್ನು ಅಳವಡಿಸಿಕೊಂಡರೆ ಅದು ಮೂರರಿಂದ ನಾಲ್ಕು ಲ.ಕೋ.ರೂ.ಹೆಚ್ಚುವರಿ ಸರಕಾರ ಬಂಡವಾಳವನ್ನು ಹೊಂದಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಬೆಟ್ಟುಮಾಡುತ್ತಿದೆ ಮತ್ತು ಈಪೈಕಿ ಕೆಲವು ಹಣವನ್ನು ಅದು ಬ್ಯಾಂಕುಗಳನ್ನು ಸದೃಢಗೊಳಿಸಲು ಬಳಸಬಹುದಾಗಿದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.







