ಎಲ್ಪಿಜಿ ಸಬ್ಸಿಡಿಯಲ್ಲಿ ಅಕ್ರಮವೆಸಗಿದರೆ ಕಠಿಣ ಕ್ರಮ: ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ ಒಎಂಸಿ
ಬೆಂಗಳೂರು, ನ.30: ಎಲ್ಪಿಜಿ ಸಬ್ಸಿಡಿ ನೀಡಿಕೆಯಲ್ಲಿ ಅಕ್ರಮವೆಸಗುವ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತೈಲ ಮಾರಾಟ ಸಂಸ್ಥೆ (ಒಎಂಸಿ) ಎಚ್ಚರಿಸಿದೆ.
ಗ್ರಾಹಕರು ಬ್ಯಾಂಕ್‌ನಲ್ಲಿ ಖಾತೆಗೆ ಆಧಾರ್ ಜೋಡಣೆ ಮತ್ತು ಕೆವೈಸಿ ಅಪ್‌ಡೇಟ್ ಮಾಡಿದ್ದರೂ ಗ್ಯಾಸ್ ಏಜೆನ್ಸಿಗಳು ಸಬ್ಸಿಡಿ ಕೊಡಲು ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಒಎಂಸಿ ಕ್ರಮ ಕೈಗೊಂಡಿದೆ.
ಹೊಗೆಮುಕ್ತ ದೇಶದ ಸಂಕಲ್ಪದೊಂದಿಗೆ ಕೇಂದ್ರ ಸರಕಾರ ಉಜ್ವಲ ಯೋಜನೆ ಜಾರಿಗೆ ತಂದಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) 66.8 ಲಕ್ಷಗಳ ಪೈಕಿ 59.3 ಲಕ್ಷ, ಭಾರತ್ ಪೆಟ್ರೊಲಿಯಂ ಕಾರ್ಪೋರೇಷನ್(ಬಿಪಿಸಿ) 38.5 ಲಕ್ಷಗಳ ಪೈಕಿ 34.4 ಮತ್ತು ಹಿಂದುಸ್ತಾನ್ ಪೆಟ್ರೊಲಿಯಂ ಕಾರ್ಪೋರೇಷನ್(ಎಚ್ಪಿಸಿ) 52.1 ಲಕ್ಷಗಳ ಪೈಕಿ 47.2 ಲಕ್ಷ ಗ್ಯಾಸ್ ಸಬ್ಸಿಡಿ ಖಾತೆಗಳು ರಾಜ್ಯದಲ್ಲಿದೆ.
ಪ್ರತಿ ತಿಂಗಳು ಲಕ್ಷಾಂತರ ರೂ. ಸಬ್ಸಿಡಿ ಹಣ ಕೇಂದ್ರದಿಂದ ಬಿಡುಗಡೆಯಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ಮತ್ತು ಅಧಿಕಾರಿಗಳು ಸಬ್ಸಿಡಿ ಹಣವನ್ನು ಗೋಲ್‌ಮಾಲ್ ಮಾಡುತ್ತಿರುವ ಬಗ್ಗೆ ಗ್ರಾಹಕರು ತೈಲ ಮಾರಾಟ ಸಂಸ್ಥೆಗಳಿಗೆ ದೂರು ನೀಡಿದರೆ ಅಂಥ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಒಎಂಸಿ ತಿಳಿಸಿದೆ.
ಕೆಲವು ಪ್ರಕರಣಗಳಲ್ಲಿ ಅಷ್ಟೇ ಸಬ್ಸಿಡಿ ಹಣ ವರ್ಗಾವಣೆ ವಿಳಂಬವಾಗಿರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿದೆಯಾ ಅಥವಾ ಇಲ್ಲವಾ ಎಂಬುದರ ಖಾತ್ರಿಗೆ www.uidai.gov.in ಮತ್ತು ಸಬ್ಸಿಡಿ ಹಣ ಖಾತೆಗೆ ಜಮೆ ಆಗಿರುವ ಬಗ್ಗೆ www.npci.org.in/apbs-faqs-customers ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು.
ಸಹಾಯವಾಣಿ: ಇಂಡಿಯನ್ ಅಯಿಲ್ ಕಾರ್ಪೋರೇಷನ್(ಐಒಸಿ) ವ್ಯಾಪ್ತಿಗೆ ಬರುವ ಎಲ್ಪಿಜಿ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ದೂ:1800233355 ಮತ್ತು ಭಾರತ್ ಪೆಟ್ರೊಲಿಯಂ ಕಾರ್ಪೋರೇಷನ್(ಬಿಪಿಸಿ) ಎಲ್ಪಿಜಿ ಗ್ರಾಹಕರು ದೂ: 1800224344 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.







