ಸಮಾಜ ಸೇವೆಗಾಗಿ ಸ್ವಯಂ ಪ್ರೇರಿತವಾಗಿ ಬಡತನ ಅಪ್ಪಿಕೊಂಡೆ: ಎಚ್.ಎಸ್.ದೊರೆಸ್ವಾಮಿ
‘ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು’ ಕಾರ್ಯಕ್ರಮ

ಬೆಂಗಳೂರು, ನ.30: ಸಮಾಜ ಸೇವೆ ಮಾಡುವವರು ಬಡತವನ್ನು ಸ್ವಯಂ ಪ್ರೇರಿತವಾಗಿ ಅಪ್ಪಿಕೊಳ್ಳಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಅವರ ಮಾತಿನಂತೆ ಬಡತನದಿಂದಲೆ ನನ್ನ ಜೀವನವನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದ್ದೇನೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.
ಶುಕ್ರವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿಯ 150ನೆ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಿದ್ದ ‘ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.
ಬಿಎಸ್ಸಿ ವಿದ್ಯಾರ್ಥಿಯಾಗಿರುವಾಗಲೆ ಸ್ವಾತಂತ್ರ ಹೋರಾಟದಲ್ಲಿ ತೊಡಗಿದ್ದೆ. ವಿದ್ಯಾರ್ಥಿ ಜೀವನದ ನಂತರ ಗಾಂಧೀಜಿ ಚಿಂತನೆಯ ಪ್ರೇರಣೆಯಿಂದ ಜನರ ಸೇವೆಯಲ್ಲಿ ತೊಡಗಿದೆ. ಆದರೆ, ನನ್ನ ವೈಯಕ್ತಿಕ ಜೀವನ ಹೇಗಿರಬೇಕೆಂದು ಚಿಂತಿಸಿದಾಗ, ಬಡತನದಿಂದಲೆ ನನ್ನ ಜೀವನವನ್ನು ರೂಪಿಸಿಕೊಳ್ಳಲು ನಿರ್ಧರಿಸಿದೆ ಎಂದು ಅವರು ನೆನೆಪು ಮಾಡಿಕೊಂಡರು.
ನನ್ನ ಮದುವೆಯ ನಂತರ ಜೀವನೋಪಾಯಕ್ಕಾಗಿ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ನಡೆಸಲು ಮುಂದಾದೆ. ಪುಸ್ತಕಗಳ ಮಾರಾಟದಿಂದ ಬಂದ ಹಣದಿಂದಲೆ 50ವರ್ಷ ಜೀವನ ನಡೆಸಿದ್ದೇನೆ. ನನ್ನ ಹೆಂಡತಿ ಹಾಗೂ ಮಕ್ಕಳು ನನ್ನೊಂದಿಗೆ ಸರಳವಾಗಿ ಜೀವನ ಸಾಗಿಸಿದರು ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿ ಕೆಲಕಾಲ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ವಿಶ್ರಾಂತಿಗಾಗಿ ತಂಗಿದ್ದರು. ಆ ಸಂದರ್ಭದಲ್ಲಿ ನಾನು ಅವರನ್ನು ಕಾಣಲು ಹೋಗಿದ್ದೆ. ಅವರು ರಾಜ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದೆ ನಮಗೆ ದೊಡ್ಡ ಹೆಮ್ಮೆ ಎನಿಸುತ್ತಿತ್ತು. ವಿಶ್ರಾಂತಿಯ ಸಂದರ್ಭದಲ್ಲೂ ಗಾಂಧೀಜಿ ಹರಿಜನ ಪತ್ರಿಕೆಗೆ ಬರೆಯುವುದು, ಸ್ವಾತಂತ್ರ ಹೋರಾಟಗಾರರೊಂದಿಗೆ ಪತ್ರ ವ್ಯವಹಾರಗಳನ್ನು ನಿರಂತರವಾಗಿ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿರುವವರು ನಮ್ಮ ಸುತ್ತಮುತ್ತಲೆ ಇದ್ದಾರೆ. ಆದರೆ, ಅವರ ಪರಿಚಯ ಯುವ ಜನತೆಗೆ ಇರುವುದಿಲ್ಲ. ಹೀಗಾಗಿ ಅಂತಹವರನ್ನು ವಿದ್ಯಾರ್ಥಿಗಳಿಗೆ ಮುಖಾಮುಖಿಯಾಗಿಸುವ ಹಾಗೂ ಸಂವಾದ ನಡೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಸಾಹಿತಿ ಬೇ.ಗೂ.ರಮೇಶ್, ಹಿರಿಯ ಪರಿಸರವಾದಿ ನಾರಾಯಣ ರೆಡ್ಡಿ ಮತ್ತಿತರರಿದ್ದರು.
ಇಂದಿನ ಮಕ್ಕಳ ಜವಾಬ್ದಾರಿ ಹೆಚ್ಚಿದೆ. ಸ್ವಾತಂತ್ರ ಭಾರತದ ಕನಸು ಇನ್ನೂ ನನಸಾಗಿಲ್ಲ. ಬಡತನ, ಅನಾರೋಗ್ಯ, ಜಾತೀಯತೆ, ಮೌಢ್ಯತೆ ಹೊಸ ಹೊಸ ರೂಪಗಳನ್ನು ಪಡೆದುಕೊಂಡು ಶೋಷಣೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ದೇಶಕ್ಕಾಗಿ ದುಡಿದವರ, ದುಡಿಯುತ್ತಿರುವವರ ಹಾದಿಯಲ್ಲಿ ಸಾಗಬೇಕು.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ







