ಮೈಸೂರು ವಿಭಾಗ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನೆ

ಮೂಡುಬಿದಿರೆ, ನ. 30: ಸ್ಪರ್ಧಾತ್ಮಕ ಮನೋಭಾವದೊಂದಿಗೆ ಭಾಗವಹಿಸುವಿಕೆಯೂ ಪ್ರಮುಖವಾದುದು. ಕ್ಷಮತೆ, ಸಹಕಾರ ಮನೋಭಾವವಿಟ್ಟುಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಒಂದು ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜು, ಮೂಡಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ `2018-19ರ ಮೈಸೂರು ವಿಭಾಗ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಗೆಲುವು ಮತ್ತು ಸೋಲು ಸಹಜ. ಅವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಮುಂದುವರಿಯುವುದರ ಜೊತೆಗೆ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹುಮಸ್ಸಿನ ಅಗತ್ಯವಿದೆ ಅದನ್ನು ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ದೇಶೀಯ ಚಿಂತನೆ ಹಾಗೂ ಪ್ರತಿಭಾ ಪ್ರದರ್ಶನವು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಪ್ರಸ್ತುತ ಕಾಲಘಟ್ಟದಲ್ಲಿ ಪಠ್ಯದ ಬೋಧನೆಯ ಜೊತೆಗೆ ತಮ್ಮಲ್ಲಿರುವ ಬುದ್ಧಿಮತ್ತೆಯನ್ನು ಮೇಲ್ದರ್ಜೆಗೆ ತರುವುದು ಅತ್ಯಗತ್ಯ. ಪ್ರಬುದ್ಧ ನಾಗರೀಕನಾಗಲು ಸಮಗ್ರ ಚಿಂತನೆ ಅವಶ್ಯ. ಪಠ್ಯೇತರ ಚಟುವಟಿಕೆಗಳು ಸಮಗ್ರ ಚಿಂತನೆಯನ್ನು ಕಟ್ಟಿಕೊಡುವಲ್ಲಿ ಸಹಾಯ ಮಾಡುತ್ತವೆ. ಶಿಕ್ಷಣದ ಜೊತೆಗೆ ಕಲೆಗಳನ್ನು ಅಳವಡಿಸಿಕೊಳ್ಳವುದು ಅಗತ್ಯ. ಆಗಲೇ ಕಲೆಗಳು ಬೆಳವಣಿಗೆಯನ್ನು ಹೊಂದುತ್ತದೆ. ಪ್ರಾಮಾಣಿಕತನ ಹಾಗೂ ಬದ್ದತೆಯನ್ನು ಜೀವನದಲ್ಲಿ ಬೆಳೆಸಿಕೊಂಡರೆ ಯಶಸ್ಸನ್ನು ಕಾಣಬಹುದು ಎಂದರು.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಉಮಾನಾಥ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸ್ಪರ್ಧೆಗೆ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳ 384 ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಭಾಗೀಯ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ಸ್ಪರ್ಧಾಳುಗಳು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಲಿದ್ದಾರೆ. ರಸಪ್ರಶ್ನೆ, ಇಂಗ್ಲೀಷ್ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆ, ಇಂಗ್ಲೀಷ್ ಹಾಗೂ ಕನ್ನಡ ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ, ಭಾವಗೀತೆ, ಭಕ್ತಿಗೀತೆ, ಚಿತ್ರಕಲೆ, ಜಾನಪದ ಗೀತೆ, ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಎಲ್ಬೀರಾ ಫಿಲೋಮಿನಾ ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ ಉದಯ್ ಮಂಜುನಾಥ್ ಅಡೇಮನೆ ನಿರೂಪಿಸಿದರು.







