ಶೂಟಿಂಗ್‌ನ ಉನ್ನತ ಗೌರವಕ್ಕೆ ಪಾತ್ರರಾದ ಅಭಿನವ್ ಬಿಂದ್ರಾ
ಹೊಸದಿಲ್ಲಿ, ನ.30: ಭಾರತದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಏಕೈಕ ಶೂಟರ್ ಎಂಬ ಹೆಗ್ಗಳಿಕೆ ಹೊಂದಿರುವ ಬಿಂದ್ರಾ ಶುಕ್ರವಾರ ಪ್ರತಿಷ್ಠಿತ ಐಎಸ್‌ಎಸ್‌ಎಫ್ ಬ್ಲೂ ಕ್ರಾಸ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಂತರ್‌ರಾಷ್ಟ್ರೀಯ ಶೂಟಿಂಗ್‌ನ ಮಾತೃಸಂಸ್ಥೆ ಐಎಸ್‌ಎಸ್‌ಎಫ್‌ನಿಂದ ನೀಡಲ್ಪಡುವ ಅತ್ಯುನ್ನತ ಗೌರವ ಬ್ಲೂ ಕ್ರಾಸ್. ಬಿಂದ್ರಾ ಬ್ಲೂ ಕ್ರಾಸ್‌ಗೆ ಭಾಜನರಾದ ಭಾರತದ ಮೊದಲ ಶೂಟರ್. ಶೂಟಿಂಗ್ ಕ್ರೀಡೆಯಲ್ಲಿ ನೀಡಿರುವ ಅತ್ಯುತ್ತಮ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ‘‘ಐಎಸ್‌ಎಸ್‌ಎಫ್‌ನ ಉನ್ನತ ಗೌರವ ಬ್ಲೂ ಕ್ರಾಸ್ ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ. ಅಥ್ಲೀಟ್‌ಗಳು ಹಾಗೂ ಐಎಸ್‌ಎಸ್‌ಎಫ್‌ನೊಂದಿಗೆ ಕೆಲಸ ಮಾಡುವ ಗೌರವ ಹಾಗೂ ಸೌಭಾಗ್ಯ ನನಗೆ ಲಭಿಸಿದೆ’’ ಎಂದು ಬಿಂದ್ರಾ ಪ್ರತಿಕ್ರಿಯಿಸಿದರು. ಬಿಂದ್ರಾ ಅವರು ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಒಲಿಂಪಿಕ್ಸ್ ಚಿನ್ನ(2008), 7 ಕಾಮನ್‌ವೆಲ್ತ್ ಗೇಮ್ಸ್ ಪದಕ ಹಾಗೂ 3 ಏಶ್ಯನ್ ಗೇಮ್ಸ್ ಪದಕಗಳನ್ನು ಜಯಿಸಿದ್ದಾರೆ. 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ್ದಾಗ ಬಿಂದ್ರಾ ಮನೆಮಾತಾಗಿದ್ದರು.
ಬಿಂದ್ರಾಗೆ 2000ರಲ್ಲಿ ಅರ್ಜುನ ಪ್ರಶಸ್ತಿ, 2001ರಲ್ಲಿ ರಾಜೀವ್ ಖೇಲ್‌ರತ್ನ ಹಾಗೂ 2009ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿತ್ತು.
2016ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಿಂದ ಎರಡನೇ ಒಲಿಂಪಿಕ್ಸ್ ಪದಕದಿಂದ ವಂಚಿತರಾಗಿದ್ದರು. ಗೇಮ್ಸ್ ಆರಂಭಕ್ಕೆ ಮೊದಲೇ ಬಿಂದ್ರಾ ಶೂಟಿಂಗ್‌ನಿಂದ ನಿವೃತ್ತಿಯಾಗುತ್ತೇನೆಂದು ಘೋಷಿಸಿದ್ದರು. ತನ್ನ 33ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದರು.





