ಕಾಫಿನಾಡಿನಲ್ಲಿ ಧೂಳೆಬ್ಬಿಸಿದ ಕಾಫಿ ಡೇ ರ‍್ಯಾಲಿ

ಚಿಕ್ಕಮಗಳೂರು, ನ.30: ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‍ಶಿಪ್ ಅಂಗವಾಗಿ ನಗರದ ಅಂಬರ್ ವ್ಯಾಲಿ ಶಾಲಾ ಮೈದಾನದಲ್ಲಿ ನಡೆದ ಕಾರುಗಳ ರ‍್ಯಾಲಿ, ರ‍್ಯಾಲಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಶರವೇಗದಲ್ಲಿ ಚಲಿಸುತ್ತಿದ್ದ ಕಾರುಗಳ ರ‍್ಯಾಲಿಯ ದೃಶ್ಯ ಕಾಫಿನಾಡಿನಲ್ಲಿ ಅಕ್ಷರಶ ಧೂಳೆಬ್ಬಿಸಿ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ನೇತೃತ್ವದಲ್ಲಿ, ಕಾಫಿ ಡೇ ಪ್ರಾಯೋಜಕತ್ವದಲ್ಲಿ ನಡೆದ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‍ಶಿಪ್‍ನ ನಾಲ್ಕನೇ ಹಂತದ ರ್ಯಾಲಿಗೆ ಗುರುವಾರ ಸಂಜೆ ಚಾಲನೆ ನೀಡಲಾಗಿತ್ತು. ಶುಕ್ರವಾರ ಸಂಜೆ 4ನೇ ಹಂತದ ರ‍್ಯಾಲಿ ಅಧಿಕೃತವಾಗಿ ಅಂಬರ್ ವ್ಯಾಲಿ ಶಾಲಾ ಆವರಣದ ಹಸಿರು ಮೈದಾನದಲ್ಲಿ ಆರಂಭವಾಯಿತು.
ಹಿಂದಿನ ಮೂರು ಸುತ್ತುಗಳಲ್ಲಿ 61 ಅಂಕಗಳನ್ನು ಪಡೆದಿದ್ದ ಮಹೇಂದ್ರ ಅಡ್ವೆಂಚರ್ಸ್ ತಂಡದ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಈ ರ‍್ಯಾಲಿಯಲ್ಲಿ ಅಗ್ರಸ್ಥಾನದೊಂದಿಗೆ ಕಣಕ್ಕಿಳಿದಿದ್ದರು. 50 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದ ಹೆಸರಾಂತ ಅಂತಾರಾಷ್ಟ್ರೀಯ ಕಾರ್ ರ‍್ಯಾಲಿ ಪಟು ಗೌರವ್ ಗಿಲ್ ಹಾಗೂ ಮೂಸಾ ಶರೀಫ್ ಅಗ್ರಸ್ಥಾನದಲ್ಲಿದ್ದವರನ್ನು ಹಿಮ್ಮೆಟ್ಟಿಸುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದ್ದಿದ್ದರೆ, ಐ.ಎನ್.ಆರ್.ಸಿ.ಯ 3 ಸುತ್ತುಗಳ ನಂತರ ಮೂರನೇ ಸ್ಥಾನದಲ್ಲಿದ್ದ ಕರ್ಣ ಕಡೂರು ಹಾಗೂ ಕಾಂತರಾಜ್ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದ್ದರು.
ಅಂತಿಮವಾಗಿ ಮೊದಲ ದಿನ ಐಎನ್‍ಆರ್‍ಸಿ ರ್ಯಾಲಿಯಲ್ಲಿ ಗೌರವ್ ಗಿಲ್ಲ ಹಾಗೂ ಸಹಚಾಲಕ ಮೂಸಾ ಶರೀಪ್ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ಣ ಕಡೂರು ಹಾಗೂ ಕಾಂತರಾಜ್ ಸ್ಥಾನ ಪಡೆದಿದ್ದು, ಶನಿವಾರ ರ‍್ಯಾಲಿ ಮುಂದುವರಿಯಲಿದೆ.







