ವಿಹಾರಿಗೆ ಆಸ್ಟ್ರೇಲಿಯದಲ್ಲಿ ಶತಕ ದಾಖಲಿಸುವ ಕನಸು

ಹೊಸದಿಲ್ಲಿ, ನ.30: ಆಂಧ್ರಪ್ರದೇಶದ ಆಲ್‌ರೌಂಡರ್ ಹನುಮ ವಿಹಾರಿ ರಣಜಿ ಟ್ರೋಫಿ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಟೆಸ್ಟ್ ಪ್ರವಾಸ ಸರಣಿಗೆ ಆಯ್ಕೆಯಾಗಿದ್ದರು. ಕಿನ್ನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಅಂತಿಮ ಹನ್ನೊಂದರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಚೊಚ್ಚಲ ಟೆಸ್ಟ್‌ನಲ್ಲಿ ನಂ.6 ಕ್ರಮಾಂಕದಲ್ಲಿ ಆಡಲು ಇಳಿದಿದ್ದ ವಿಹಾರಿ ಆಕರ್ಷಕ ಅರ್ಧಶತಕ ದಾಖಲಿಸಿದ್ದರು. 3 ವಿಕೆಟ್‌ಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದರು.
ಇದೀಗ ಹನುಮ ವಿಹಾರಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಡಿ.6ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕಿದರೆ ಶತಕ ದಾಖಲಿಸುವ ಯೋಜನೆಯಲ್ಲಿದ್ದಾರೆ. ‘‘ಆಸ್ಟ್ರೇಲಿಯದ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ನನ್ನ ನಾಯಕ ವಿರಾಟ್ ಕೊಹ್ಲಿ ಮತ್ತು ಹಿರಿಯ ಆಟಗಾರರು ನನಗೆ ಸಹಾಯ ಮಾಡಿದರು. ಆಸ್ಟ್ರೇಲಿಯದಲ್ಲಿ ಎಲ್ಲವನ್ನು ಕಲಿಯಬೇಕಾಗಿದೆ. ಇಂಗ್ಲೆಂಡ್‌ನಲ್ಲಿ ಆಡಿದಂತೆ ಆಸ್ಟ್ರೇಲಿಯದಲ್ಲೂ ಆಡಲು ಸಿದ್ಧ. ನಾಯಕ ಕೊಹ್ಲಿ ಹೇಳಿದರೆ ಯಾವುದೇ ಕ್ರಮಾಂಕದಲ್ಲೂ ಆಡಲು ತಯಾರಿ ಇದ್ದೇನೆ. ಅವರು ಮಧ್ಯಮ ಸರದಿಯಲ್ಲಿ ಅಥವಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಅವಕಾಶ ನೀಡಿದರೂ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲೆ. ಇಂಗ್ಲೆಂಡ್‌ನಲ್ಲಿ ಸಿಕ್ಕಿದ ಅವಕಾಶದಲ್ಲಿ ಅರ್ಧಶತಕ ದಾಖಲಿಸಿದ್ದೆ. ಆಸ್ಟ್ರೇಲಿಯದಲ್ಲಿ ಶತಕ ದಾಖಲಿಸಲು ಬಯಸಿರುವೆ ಎಂದು ಹನುಮ ವಿಹಾರಿ ತಿಳಿಸಿದ್ದಾರೆ.
ವಿಹಾರಿ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ನಾಯಕ ಕೊಹ್ಲಿ ಜೊತೆ 51 ರನ್ ಮತ್ತು ರವೀಂದ್ರ ಜಡೇಜ ಜೊತೆ 77 ರನ್‌ಗಳ ಜೊತೆಯಾಟ ನೀಡಿದ್ದರು. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ವಿಹಾರಿ ಇಂಗ್ಲೆಂಡ್‌ನ ಅಲಿಸ್ಟೈರ್ ಕುಕ್, ನಾಯಕ ಜೋ ರೂಟ್ ಮತ್ತು ಸ್ಯಾಮ್ ಕರ್ರನ್ ವಿಕೆಟ್ ಉಡಾಯಿಸಿದ್ದರು.
2017-18ನೇ ಸಾಲಿನ ರಣಜಿ ಟ್ರೋಫಿ ಟೂರ್ನಮೆಂಟ್‌ನಲ್ಲಿ 94ರ ಸರಾಸರಿಯಂತೆ 6 ಪಂದ್ಯಗಳಲ್ಲಿ 752 ರನ್ ಗಳಿಸಿದ್ದರು. ಒಡಿಶಾ ವಿರುದ್ಧ ಚೊಚ್ಚಲ ತ್ರಿಶತಕ (302) ದಾಖಲಿಸಿದ್ದರು. ತಮಿಳುನಾಡು ತಂಡದ ಆಟಗಾರ ವಿಹಾರಿ ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ವಿರುದ್ಧ 327 ಎಸೆತಗಳಲ್ಲಿ 183 ರನ್ ಸಿಡಿಸಿದ್ದರು.







