ಇನ್ನು ಮುಂದೆ ಅಂಗಾಂಗ ರವಾನೆಗೆ ಆಸ್ಪತ್ರೆಗಳಲ್ಲಿ ಡ್ರೋನ್ ಬಂದರು
ಹೊಸದಿಲ್ಲಿ, ನ. 30: ಸಂಚಾರ ದಟ್ಟಣೆಯಿಂದ ತುಂಬಿರುವ ಭಾರತದ ನಗರಗಳಲ್ಲಿ ಇನ್ನು ಮುಂದೆ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಂಗಾಂಗಳನ್ನು ತ್ವರಿತವಾಗಿ ರವಾನೆ ಮಾಡಲು ಗ್ರೀನ್ ಕಾರಿಡಾರ್ ಅಥವಾ ವಿಶೇಷ ರಸ್ತೆ ವ್ಯವಸ್ಥೆ ಬೇಕಾಗಿಲ್ಲ. ಡ್ರೋನ್‌ಗಳು ಈ ಕೆಲಸವನ್ನು ಮಾಡಲಿವೆ. ಅದಕ್ಕಾಗಿ ಆಸ್ಪತ್ರೆಗಳಲ್ಲಿ ಡ್ರೋನ್ ಬಂದರು ಆರಂಭವಾಗಲಿದೆ.
ನಾವು ಡಿಸೆಂಬರ್ 1ರಿಂದು ಡ್ರೋನ್‌ಗಳ ನೋಂದಣಿ ಆರಂಭಿಸಲಿದ್ದೇವೆ. ಭಾರತದಲ್ಲಿ ಡ್ರೋನ್‌ಗಳಿಗೆ ಕಾನೂನಾತ್ಮಕ ಸ್ಥಾನ ನೀಡಲು ಮುಂದಿನ ತಿಂಗಳಿಂದ ಅಗತ್ಯವಿರುವ ಪರವಾನಿಗೆ ನೀಡಲಾಗುವುದು. ಆಸ್ಪತ್ರೆಗಳಲ್ಲಿ ಡ್ರೋನ್ ಬಂದರು ರೂಪಿಸಲು ಚಿಂತಿಸುತ್ತಿದ್ದೇವೆ ಎಂದು ಕೇಂದ್ರದ ವೈಮಾನಿಕ ಖಾತೆಯ ಸಹಾಯಕ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
ಇತ್ತೀಚೆಗೆ ಘೋಷಿಸಲಾಗಿರುವ ಡ್ರೋನ್ 2.0 ನೀತಿ ಅಡಿಯಲ್ಲಿ ಆಸ್ಪತ್ರೆಗಳಲ್ಲಿರುವ ಡ್ರೋನ್ ಬಂದರುಗಳು ಸ್ವೀಕರಿಸುವವರಿಗೆ ಶೀಘ್ರದಲ್ಲಿ ಅಂಗಾಂಗಗಳನ್ನು ತಲುಪಿಸುವಲ್ಲಿ ನೆರವಾಗಲಿದೆ. ನಾಗರಿಕ ವೈಮಾನಿಕ ಅವಶ್ಯಕತೆಗಳ ಕುರಿತ ಕರಡನ್ನು ಸಮಾಲೋಚನೆಗಾಗಿ ಮುಂಬೈಯಲ್ಲಿ ಜನವರಿ 15ರಂದು ನಡೆಯಲಿರುವ ಜಾಗತಿಕ ವೈಮಾನಿಕ ಶೃಂಗದಲ್ಲಿ ಪ್ರಕಟಿಸಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ.
ಡ್ರೋನ್‌ಗಳ ಬಳಕೆಗಾಗಿ ವಿಶೇಷ ಡಿಜಿಟಲ್ ವಾಯು ಅವಕಾಶ ಸೃಷ್ಟಿಸಲಾಗುವುದು. ಮುಂದಿನ ಹಂತದಲ್ಲಿ ಓರ್ವ ಪೈಲೆಟ್ ಹಲವು ಡ್ರೋನ್‌ಗಳನ್ನು ನಿರ್ವಹಿಸಲು ಅವಕಾಶ ನೀಡಲು ಡ್ರೋನ್ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗುವುದು. ಈ ಬಗ್ಗೆ ಶೀಘ್ರ ಶ್ವೇತ ಪತ್ರ ಹೊರಡಿಸಲಾಗುವುದು ಎಂದು ಸಿನ್ಹಾ ಹೇಳಿದ್ದಾರೆ.
ದೊಡ್ಡ ಡ್ರೋನ್ ಅನ್ನು ಕಾರ್ಯಾಚರಿಸಲು ಪರವಾನಿಗೆ ಪಡೆಯಲು 25 ಸಾವಿರ ರೂ. ವೆಚ್ಚವಾಗಲಿದೆ. ಡ್ರೋನ್‌ನಂತಹ ರಿಮೋಟ್ ಮೂಲಕ ನಿಯಂತ್ರಿಸುವ ವಿಮಾನ ವ್ಯವಸ್ಥೆ (ಆರ್‌ಪಿಎಎಸ್)ಗೆ ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಕಾನೂನುಗಳನ್ನು ರೂಪಿಸಿದೆ. ಅದು ಈ ಡ್ರೋನ್‌ಗಳಲ್ಲಿ ನ್ಯಾನೊ (250 ಗ್ರಾಂ ತೂಕದ ವರೆಗೆ), ಮೈಕ್ರೊ (250 ಗ್ರಾಂ.ನಿಂದ 2 ಕಿ.ಗ್ರಾಂ.), ಹಾಗೂ 2ರಿಂದ 25 ಕಿ.ಗ್ರಾಂ.ನ ಸಣ್ಣ, 25ರಿಂದ 150 ಕಿ.ಗ್ರಾಂ.ನ ಮಧ್ಯಮ ಹಾಗೂ 150 ಕಿ.ಗ್ರಾಂ.ನ ದೊಡ್ಡ ಡ್ರೋನ್‌ಗಳೆಂದು ವಿಭಾಗ ಮಾಡಿದೆ ಎಂದು ಮೂಲಗಳು ತಿಳಿಸಿವೆ.