ಬಿಜೆಪಿ ಆಡಳಿತದ ಗುಜರಾತ್, ಉ.ಪ್ರದೇಶ ಸೇರಿ 4 ರಾಜ್ಯಗಳಲ್ಲಿ ಗಲಭೆಯೇ ನಡೆದಿಲ್ಲ ಎಂದು ಸುಳ್ಳು ಹೇಳಿದ ಅಮಿತ್ ಶಾ
ಇಲ್ಲಿವೆ ವಾಸ್ತವ ವರದಿ
ಮುಂಬೈ, ಡಿ.1: “ನಮ್ಮ ಸರಕಾರಗಳೇಕೆ ಅಧಿಕಾರಕ್ಕೆ ಮರಳುತ್ತಿವೆ?, ಗುಜರಾತ್ನಲ್ಲಿ ನಾವು 27 ವರ್ಷ ಆಡಳಿತ ನಡೆಸಿದ್ದೇವೆ, ಮಧ್ಯ ಪ್ರದೇಶದಲ್ಲಿ 15 ವರ್ಷ, ಛತ್ತೀಸಗಢದಲ್ಲಿ 15 ವರ್ಷ ಆಳ್ವಿಕೆ ನಡೆಸಿದ್ದೇವೆ. ನಮ್ಮ ಸರಕಾರಗಳು ಅಧಿಕಾರಕ್ಕೆ ಮರಳಲು ಅಭಿವೃದ್ಧಿ ಮುಖ್ಯ ಕಾರಣ. ಆದರೆ ನಾವು ಕೋಮುವಾದಿ ಪಕ್ಷವೆಂದು ಅವರು ಆರೋಪಿಸುತ್ತಿದ್ದಾರೆ. ನಮ್ಮ ಸರಕಾರ ಗುಜರಾತ್ನಲ್ಲಿ ಅಧಿಕಾರ ವಹಿಸಿದಾಗಿನಿಂದ ಒಂದೇ ಒಂದು ಗಲಭೆ ನಡೆದಿಲ್ಲ, ಮಧ್ಯ ಪ್ರದೇಶ, ಛತ್ತೀಸಗಢ, ಉತ್ತರ ಪ್ರದೇಶದಲ್ಲೂ ದಂಗೆಗಳು ನಡೆದಿಲ್ಲ''… ಈ ಮಾತುಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನವೆಂಬರ್ 23ರಂದು ಝೀ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಆದರೆ ಅಮಿತ್ ಶಾ ಅವರ ಹೇಳಿಕೆಗಳೆಲ್ಲವೂ ಸುಳ್ಳು.
►ಗುಜರಾತ್ ರಾಜ್ಯದಲ್ಲಿ 2002ರಲ್ಲಿ ನಡೆದ ಗಲಭೆ ಸೇರಿದಂತೆ 1998ರಿಂದ 2016ರ ತನಕ 35,568 ಗಲಭೆ ವರದಿಯಾಗಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ದಾಖಲೆಗಳು ತಿಳಿಸುತ್ತವೆ. ರಾಜ್ಯದಲ್ಲಿ ಬಿಜೆಪಿ 1998ರಿಂದ ಅಧಿಕಾರದಲ್ಲಿದೆ. 2002ರ ಹಿಂಸಾಚಾರದಲ್ಲಿ ರಾಜ್ಯದಲ್ಲಿ 1,044 ಮಂದಿ ಹತ್ಯೆಯಾಗಿದ್ದರೆ, 223 ಮಂದಿ ನಾಪತ್ತೆಯಾಗಿದ್ದರು. ಹಿಂಸಾಚಾರದಲ್ಲಿ 2,500 ಮಂದಿಗೆ ಗಾಯಗಳಾಗಿತ್ತು ಎಂದು ರಾಜ್ಯಸಭೆಗೆ ಗೃಹ ಸಚಿವಾಲಯ ಮೇ 11, 2005ರಲ್ಲಿ ನೀಡಿದ ಮಾಹಿತಿಯಲ್ಲಿ ತಿಳಿಸಿತ್ತು.
►ಮಧ್ಯ ಪ್ರದೇಶದಲ್ಲಿ 2003ರಿಂದ 2016ರ ಬಿಜೆಪಿ ಆಡಳಿತದ ಅವಧಿಯಲ್ಲಿ 32,050 ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಎನ್ಸಿಆರ್ಬಿ ಮಾಹಿತಿ ತಿಳಿಸುತ್ತದೆ. ರಾಜ್ಯದಲ್ಲಿ ಬಿಜೆಪಿ 2003ರಿಂದ ಅಧಿಕಾರದಲ್ಲಿದೆ. 2014ರಿಂದ 2016ರ ತನಕ ರಾಜ್ಯದಲ್ಲಿ 109 ಮತೀಯ ದಂಗೆಗಳು ನಡೆದಿವೆ.
►ಛತ್ತೀಸಗಢದಲ್ಲೂ 2003ರಿಂದ 2016ರ ಬಿಜೆಪಿ ಆಡಳಿತದ ಅವಧಿಯಲ್ಲಿ 12,265 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಎನ್ಸಿಆರ್ಬಿ ಅಂಕಿಅಂಶಗಳು ತಿಳಿಸುತ್ತವೆ. ಈ ರಾಜ್ಯದಲ್ಲೂ ಬಿಜೆಪಿ 2003ರಿಂದ ಅಧಿಕಾರದಲ್ಲಿದೆ.
►ಉತ್ತರ ಪ್ರದೇಶದಲ್ಲಿ 2017ರಲ್ಲಿ 195 ಮತೀಯ ಗಲಭೆಗಳು ನಡೆದಿವೆ ಎಂದು ಲೋಕಸಭೆಗೆ ಫೆಬ್ರವರಿ ಆರರಂದು ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಘಟನೆಗಳಲ್ಲಿ 44 ಜನರು ಸಾವಿಗೀಡಾಗಿ 542 ಮಂದಿ ಗಾಯಗೊಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಮಾರ್ಚ್ 2017ರಲ್ಲಿ ಅಧಿಕಾರಕ್ಕೆ ಬಂದಿತ್ತು. ಕಳೆದ ವರ್ಷದ ಜನವರಿಯಿಂದ ಮೇ ತನಕ ಒಟ್ಟು 60 ಮತೀಯ ಹಿಂಸಾಚಾರ ಪ್ರಕರಣಗಳು ರಾಜ್ಯದಿಂದ ವರದಿಯಾಗಿವೆ.
ಕೃಪೆ: factchecker.in