ಡಾ. ವಿಷ್ಣು ಸ್ಮಾರಕ ಮಂಗಳೂರಿನಲ್ಲಾಗಲಿ: ನಿರ್ಮಾಪಕ ಧನರಾಜ್
ಮಂಗಳೂರು, ಡಿ.1: ಡಾ. ವಿಷ್ಣುವರ್ಧನ್ ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಗೊಂದಲಗಳು ಸೃಷ್ಠಿಯಾಗುತ್ತಿದೆ. ಇದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಅವರ ಸ್ಮಾರಕ ಮಂಗಳೂರಿನಲ್ಲೇ ಆಗಲಿ ಎಂದು ಚಿತ್ರ ನಿರ್ಮಾಪಕ ಆರ್. ಧನರಾಜ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷ್ಣುವರ್ಧನ್ ಅವರ ಪತ್ನಿ ಭಾರತೀ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಸ್ಮಾಕ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ. ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲು ಆಗ್ರಹಿಸುತ್ತಿದ್ದಾರೆ. ವಿಷ್ಣು ಅವರ ಜೀವಿತ ಕಾಲದಲ್ಲಿ ಕರಾವಳಿಯ ಜನರೊಂದಿಗೆ ಉತ್ತಮ ಒಡನಾಟ ಹೊಂದ್ದಿದರು. ಅವರ ಅನೇಕ ಚಿತ್ರಗಳು ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಅವರ ಸ್ಮಾರಕ ಮಂಗಳೂರಿನಲ್ಲಿ ಆಗಬೇಕು ಎಂದು ಆಗ್ರಹಿಸಿದರು.
ಸ್ಮಾರಕಕ್ಕಾಗಿ ಮಂಗಳೂರು ಪರಿಸರದಲ್ಲೇ ಎರಡು ಎಕರೆ ಸರಕಾರಿ ಜಾಗವನ್ನು ಗುರುತಿಸಬೇಕು. ಈ ಬಗ್ಗೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನ ಅವರ ಗಮನಕ್ಕೆ ತರಲಾಗಿದೆ. ವಿಷ್ಣು ಸ್ಮಾರಕ ವಿವಾದ ಬಗೆಹರಿಯಲು ಇದೇ ಸೂಕ್ತ ಮಾರ್ಗ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಮನಹರಿಸಬೇಕು ಎಂದು ತಿಳಿಸಿದರು.
ನಿರ್ಮಾಪಕ ಪ್ರವೀಣ್ ಕೊಂಚಾಡಿ, ಸಹ ನಿರ್ಮಾಪಕ ಗೋಪಾಲ ಗಟ್ಟಿ ಶರವು ಉಪಸ್ಥಿತರಿದ್ದರು.