'ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಹಿರಿದು'
ನೀತಿ ಆಯೋಗದ ಸಭೆಯಲ್ಲಿ ಕ್ಯಾಂಪ್ಕೊ ಅಭಿಮತ

ಮಂಗಳೂರು, ಡಿ.1: ಕೃಷಿ ಸಂಸ್ಕರಣೆ ಹಾಗೂ ಮಾರಾಟದ ಮೂಲಕ ಬೆಲೆಯ ಸ್ಥಿರತೆಯನ್ನು ಕಾಪಾಡಿ ಬೆಳೆಗಾರರ ಹಿತರಕ್ಷಣೆಗೆ ಕ್ಯಾಂಪ್ಕೊ ಬದ್ಧವಾಗಿದೆ. ಕೊಕ್ಕೊ, ರಬ್ಬರ್, ಕಾಳುಮೆಣಸು ಖರೀದಿಯೊಂದಿಗೆ ಉಪ ಬೆಳೆಗಳಿಗೆ ಪೋತ್ಸಾಹ ನೀಡಲಾಗುತ್ತದೆ. ಸ್ವದೇಶಿ ಉತ್ಪನ್ನವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಕ್ಯಾಂಪ್ಕೊ ಚಾಕಲೇಟು, ಮುಂದಕ್ಕೆ ತೆಂಗಿನಕಾಯಿ ಖರೀದಿ ಸಂಸ್ಕರಣೆ ಯೋಜನೆಗಳು ರಪ್ತು ಉದ್ದೇಶಿತ ಕಾರ್ಯಯೋಜನೆಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ತನ್ನ ಬದ್ಧತೆಯೊಂದಿಗೆ ಸದಸ್ಯರ ವಿಶ್ವಾಸಗಳಿಸುತ್ತಲೇ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿರುವ ಸಹಕಾರಿ ರಂಗವನ್ನು ಬೆಳಗುತ್ತಿರುವ ಭಾರತದ ಮುಕುಟ ರತ್ನದ ರೂಪದಲ್ಲಿ ರಾಜ್ಯನೀತಿ ರೂಪಿಸುವವರು ಪರಿಗಣಿಸಬೇಕು, ಸಹಕಾರಿ ರಂಗದ ಬಗ್ಗೆ ಮೃದು ಧೋರಣೆ ತಳೆಯಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಒತ್ತಾಯಿಸಿದರು.
ಭಾರತ ಪರಿವರ್ತನೆಯ ರಾಷ್ಟ್ರೀಯ ಸಂಸ್ಥೆ (ನೀತಿ ಆಯೋಗ)ಯು ಹೊಸದಿಲ್ಲಿಯ ತನ್ನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಅಭಿವೃದ್ಧಿಯ ಹರಿಕಾರ - ಸಹಕಾರಿ ರಂಗ’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ವಿಚಾರ ಆಧಾರಿತ ಸಮಾಲೋಚನಾ ಸಭೆಗೆ ಕೃಷಿ ಸಂಸ್ಕರಣೆ, ಹೈನುಗಾರಿಕೆ ಮತ್ತು ಮತ್ಸೋದ್ಯಮ ಕ್ಷೇತ್ರಗಳನ್ನು ಆಯ್ದುಕೊಳ್ಳಲಾಗಿತ್ತು. ಕ್ಯಾಂಪ್ಕೊದ ಜೊತೆಗೆ ರಾಷ್ಟ್ರೀಯ ಮಟ್ಟದ, ಭಾರತೀಯ ರಾಷ್ಟ್ರೀಯ ಸಹಕಾರಿ ಸಂಘ, ಎನ್‌ಸಿಡಿಸಿ, ಇಪ್ಕೊ, ಕ್ರಿಬ್ಕೊ, ಸಹಕಾರ ಭಾರತಿ, ನೇಫೆಡ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಂವಿಧಾನದ 97ನೇ ತಿದ್ದುಪಡಿಯನ್ನು ಅಕ್ಷರಶ: ಜಾರಿಗೊಳಿಸಬೇಕು, ಸಹಕಾರಿ ರಂಗವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಹಕಾರಿ ನೀತಿಯನ್ನು ರೂಪಿಸಬೇಕು, ನಗದುರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಮತ್ತು ಡಿಜಿಟಲ್ ಬಳಕೆಯೊಂದಿಗೆ ಸ್ಮಾರ್ಟ್ ಕೋ ಆಪರೇಟಿವ್‌ಗಳನ್ನು ಅಭಿವೃದ್ಧಿಪಡಿಸಬೇಕು, ಸಹಕಾರಿ ರಂಗಕ್ಕೆ ನಿರ್ದಿಷ್ಟವಾದ ತೆರಿಗೆ ನೀತಿಯನ್ನು ರೂಪಿಸಬೇಕು, ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಮಟ್ಟದಲ್ಲಿ ನಿಖರವಾದ ಅಂಕಿಅಂಶಗಳನ್ನು ಸಂಗ್ರಹಿಸಬೇಕು, ಸ್ವಯಮಾಡಳಿತ ನೀತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸರಕಾರದ ನಿಯಂತ್ರಣವನ್ನು ಮುಕ್ತಗೊಳಿಸಬೇಕು, ಸಹಕಾರಿ ಸಂಸ್ಥೆಗಳ ಸ್ಥಾಪನೆಯ ಆರಂಭಿಕ ಹಂತದಲ್ಲಿ ನಿಯಮಾವಳಿಗಳನ್ನು ನಿಗದಿಗೊಳಿಸಬೇಕು, ಸದಸ್ಯರಿಗೆ ರಿಯಾಯಿತಿ ಮತ್ತು ಆರಂಭಿಕ ಸಾಲಗಳು ಹಾಗೂ ಬೆಂಬಲವನ್ನು ನೀಡುವ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಬೇಕು, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಾಮರ್ಥ್ಯ ತರಬೇತಿಯನ್ನು ನೀಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.
ಈ ಸಂದರ್ಭ ಭಾರತೀಯ ರಿಸರ್ವ ಬ್ಯಾಂಕ್‌ನ ನಿರ್ದೇಶಕ ಮತ್ತು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಮರಾಠೆ, ಮಂಗಳೂರಿನ ಲೆಕ್ಕ ಪರಿಶೋಧಕ ಚಂದ್ರಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.