ಕ್ರೈಸ್ತ ಅಭಿವೃದ್ಧಿ ನಿಗಮದ ಅನುದಾನ ಉಡುಪಿಗೂ ನೀಡಿ: ಬಿಷಪ್
ಸಚಿವೆ ಜಯಮಾಲಾರಿಂದ ಉಡುಪಿ ಬಿಷಪ್ ಭೇಟಿ

ಉಡುಪಿ, ಡಿ.1: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಶನಿವಾರ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಕ್ರೈಸ್ತ ಅಭಿವೃದ್ಧಿ ನಿಗಮದ ಮೂಲಕ ಕ್ರೈಸ್ತ ಸಮುದಾಯಕ್ಕೆ 175 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಯಾವುದೇ ರೀತಿಯ ಅನುದಾನ ಉಡುಪಿ ಧರ್ಮ ಪ್ರಾಂತಕ್ಕೆ ಈವರೆಗೆ ಪಡೆಯಲು ಸಾಧ್ಯವಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕೆಂದು ಧರ್ಮಾಧ್ಯಕ್ಷರು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಕೆಥೊಲಿಕ್ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀ ಸಂಘಟನೆಯ ಸದಸ್ಯರು ಸಚಿವರಿಗೆ ಮನವಿ ಸಲ್ಲಿಸಿ ಧರ್ಮಪ್ರಾಂತದ ವತಿಯಿಂದ ಈಗಾಗಲೇ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಕಿರು ಸಾಲ ಹಾಗೂ ಸಹಾಯ ಧನ ಯೋಜನೆಯಡಿ ಸಾಲವನ್ನು ಪಡೆದು ಆರ್ಥಿಕ ಸ್ವಾವಲಂಬನೆ ಪಡೆದು ಶೇ.100 ಸಾಲ ಮರುಪಾವತಿಯನ್ನು ಮಾಡ ಲಾಗಿದೆ ಎಂದು ತಿಳಿಸಿದರು.
ಕಿರು ಸಾಲ ಹಾಗೂ ಸಹಾಯ ಧನ ಯೋಜನೆಯಡಿ ಮಹಿಳೆಯರು ಸಂಪೂರ್ಣ ಯೋಜನೆಯನ್ನು ಪಡೆಯಲು ಕೆಲವೊಂದು ಅಂಶಗಳು ತೊಡ ಕಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ 10000ರೂ. ಅನುದಾನಕ್ಕೆ 5000 ರೂ. ಸಹಾಯಧನ ಲಭ್ಯವಿದೆ. ಆದುದರಿಂದ ಸರಕಾರ ಸಾಲದ ಮಿತಿಯನ್ನು 10000ದಿಂದ 15000ಕ್ಕೆ ಹಾಗೂ ಸಹಾಯ ಧನದ ಮಿತಿಯನ್ನು 5000 ದಿಂದ 7000ಕ್ಕೆ ಏರಿಸುವಂತೆ ಮನವಿ ಮಾಡಿದರು.
ಅಲ್ಲದೆ ಸರಕಾರದ ಮಟ್ಟದಲ್ಲಿ ಶೈಕ್ಷಣಿಕ ಯೋಜನೆಗಳಿಗೆ ಆದಾಯ ಮಿತಿ ಯನ್ನು ಹೆಚ್ಚಿಸಿದಂತೆ ಈ ಯೋಜನೆಗೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ 1.5 ಲಕ್ಷ ರೂ. ಹಾಗೂ ನಗರ ಪ್ರದೇಶದ ಮಹಿಳೆಯರಿಗೆ 2 ಲಕ್ಷ ರೂ. ಆದಾಯ ಮಿತಿ ನಿಗದಿಗೊಳಿಸಬೇಕು. ಬಡ್ಡಿ ರಹಿತ ಸಾಲದ ವ್ಯವಸ್ಥೆಯನ್ನು ಕೇವಲ ಸ್ತ್ರೀ ಶಕ್ತಿ ಗುಂಪುಗಳಿಗೆ ಮೀಸಲಿಡದೆ ಎಲ್ಲಾ ವರ್ಗದ ಬಡ ಮಹಿಳೆಯರ ಸ್ವಸಹಾಯ ಗುಂಪುಗಳಿಗೂ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ, ಕೆಥೊಲಿಕ್ ಸ್ತ್ರೀಸಂಘಟನೆಯ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷೆ ಜೆನೆಟ್ ಬಾರ್ಬೊಜಾ, ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಸಂಘಟನೆಯ ಮಾಜಿ ಅಧ್ಯಕ್ಷ ಜುಡಿತ್ ಫೆರ್ನಾಂಡಿಸ್, ಕಾರ್ಯದರ್ಶಿ ಕ್ಲೊಟಿಲ್ಡಾ ಡಿಸೋಜ, ಕೋಶಾಧಿಕಾರಿ ಕ್ಲಾರಾ ರೇಗೊ, ಸಂಯೋಜಕ ಸಿಸ್ಟರ್ ಜೆನೆಟ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.