ಸಮರ್ಥ ಶಿಕ್ಷಕನಿಂದ ಉತ್ತಮ ಸಮಾಜ ನಿರ್ಮಾಣ: ಸೈಯದ್ ಬ್ಯಾರಿ
ಮಂಗಳೂರು ವಿವಿ ಪ್ರಥಮ ರ್ಯಾಂಕ್ ಪಡೆದ ಬ್ಯಾರೀಸ್ ಕಾಲೇಜಿನ ಚಂದ್ರಿಕಾಗೆ ಸನ್ಮಾನ

ಕುಂದಾಪುರ, ಡಿ.1: ಶಿಕ್ಷಕ ವೃತ್ತಿ ಸಮಾಜದ ಬೇರೆ ಎಲ್ಲ ವೃತ್ತಿಗಳಿಂತಲೂ ಶ್ರೇಷ್ಠವಾದುದು. ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜ ಹಾಗೂ ದೇಶ ನಿರ್ಮಿಸಲು ಸಾಧ್ಯ ಎಂದು ಕೋಡಿ ಹಾಜಿ ಕೆ. ಮೊಹಿದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್‌ನ ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.
ಕೋಡಿಯ ಬ್ಯಾರೀಸ್ ಕಾಲೇಜ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಶನಿವಾರ ನಡೆದ ಬಿಎಡ್ ಕಾಲೇಜಿನ ಪ್ರ-ಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಈ ಸಾಲಿನ ಬಿ.ಎಡ್ ಪರೀಕ್ಷೆಯಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ಕಾಲೇಜಿನ ಚಂದ್ರಿಕಾರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಾಮುಖ್ಯವಾಗಿದ್ದು, ಜಪಾನ್, ತೈವಾನ್, ಸಿಂಗಾಪುರದಂತಹ ರಾಷ್ಟ್ರಗಳು ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಹೊಂದಲು ಅಲ್ಲಿನ ಶಿಕ್ಷಣ ಕ್ರಾಂತಿಯೇ ಪ್ರಮುಖ ಕಾರಣವಾಗಿದೆ. ಭಾರತ ದಲ್ಲಿರುವ ಶಿಕ್ಷಣ ವ್ಯವಸ್ಥೆಯು ಪಠ್ಯಕ್ಕೆ ಮಾತ್ರ ಸೀಮಿತವಾಗಿರಬಾರದು. ಇತರ ವಿಚಾರಗಳ ಅಧ್ಯಯನದ ಬಗ್ಗೆಯೂ ಗಮನಕೊಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮಂಗಳೂರು ವಿವಿಯ ಶೈಕ್ಷಣಿಕ ವಿಭಾಗದ ಡೀನ್ ಡಾ. ಕಿಶೋರ್ ಕುಮಾರ್ ಮಾತನಾಡಿದರು. ಬ್ಯಾರೀಸ್ ಗ್ರೂಪ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಕೆ.ಎಂ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಚಂದ್ರಿಕಾ ಅವರನ್ನು ಸನ್ಮಾನಿಸಲಾಯಿತು.
ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕ ದೋಮ ಚಂದ್ರ ಶೇಖರ್, ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್, ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಶೆಟ್ಟಿ, ಡಿಎಡ್ ಕಾಲೇಜಿನ ಪ್ರಾಂಶು ಪಾಲ ಫಿರ್ದೋಸ್, ಚಂದ್ರಿಕಾ ಅವರ ಪತಿ ಪ್ರವೀಣ್ ಕಲ್ಲಾಗರ ಉಪಸ್ಥಿತರಿದ್ದರು. ಬ್ಯಾರೀಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್. ಸ್ವಾಗತಿಸಿದರು.
ಕುಟುಂಬ, ಶಿಕ್ಷಕರ ಸಹಕಾರದಿಂದ ಸಾಧನೆ : ಚಂದ್ರಿಕಾ
‘ಬಿ.ಎಡ್‌ಗೆ ಸೇರ್ಪಡೆಯಾಗುವ ಸಂದರ್ಭ ನಾನು ವಿವಾಹಿತೆಯಾಗಿ ಎರಡು ವರ್ಷದ ಮಗುವಿನ ತಾಯಿ ಆಗಿದ್ದೆ. ಆದರೆ ಇದು ಯಾವುದ ರಿಂದಲೂ ನನಗೆ ಸಮಯದ ಅಭಾವ ಆಗಿಲ್ಲ. ಎಲ್ಲರಿಗೂ ಸಮಯ ಇರುತ್ತದೆ. ಆದರೆ ಅದನ್ನು ಬಳಸಿಕೊಳ್ಳುವ ಮತ್ತು ಯಾವುದಕ್ಕೆ ನಮ್ಮ ಆದ್ಯತೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಕುಟುಂಬ, ಶಿಕ್ಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ರ್ಯಾಂಕ್ ವಿಜೇತೆ ಚಂದ್ರಿಕಾ ಹೇಳಿದರು.