3,000 ಕೋ.ರೂ.ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ, ಎಆರ್ವಿಗಳ ಖರೀದಿಗೆ ರಕ್ಷಣಾ ಸಚಿವಾಲಯದ ಒಪ್ಪಿಗೆ
![3,000 ಕೋ.ರೂ.ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ, ಎಆರ್ವಿಗಳ ಖರೀದಿಗೆ ರಕ್ಷಣಾ ಸಚಿವಾಲಯದ ಒಪ್ಪಿಗೆ 3,000 ಕೋ.ರೂ.ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ, ಎಆರ್ವಿಗಳ ಖರೀದಿಗೆ ರಕ್ಷಣಾ ಸಚಿವಾಲಯದ ಒಪ್ಪಿಗೆ](https://www.varthabharati.in/sites/default/files/images/articles/2018/12/1/165970.jpg)
ಹೊಸದಿಲ್ಲಿ,ಡಿ.1: ಭಾರತೀಯ ಸಶಸ್ತ್ರ ಪಡೆಗಳ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ 3,000 ಕೋ.ರೂ.ಗಳ ವೆಚ್ಚದಲ್ಲಿ ಮಿಲಿಟರಿ ಖರೀದಿಗಳಿಗೆ ರಕ್ಷಣಾ ಸಚಿವಾಲಯವು ಶನಿವಾರ ಒಪ್ಪಿಗೆ ನೀಡಿದೆ.
ನೌಕಾಪಡೆಯ ಎರಡು ಸ್ಟೆಲ್ತ್ ಫ್ರಿಗೇಟ್ ಅಥವಾ ರಾಡಾರ್ಗಳ ಕಣ್ಣಿಗ ಬೀಳದೇ ರಹಸ್ಯವಾಗಿ ಚಲಿಸುವ ಯುದ್ಧನೌಕೆಗಳಿಗಾಗಿ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಸೇನೆಯ ಮುಖ್ಯ ಅರ್ಜುನ್ ಯುದ್ಧ ಟ್ಯಾಂಕ್ಗಳಿಗಾಗಿ ಆರ್ಮರ್ಡ್ ರಿಕವರಿ ವಾಹನ(ಎಆರ್ವಿ)ಗಳು ಈ ಖರೀದಿಯಲ್ಲಿ ಸೇರಿವೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿಯ ಸಭೆಯು 3,000 ಕೋ.ರೂ.ವೆಚ್ಚದಲ್ಲಿ ರಕ್ಷಣಾ ಉಪಕರಣಗಳ ಖರೀದಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಭಾರತವು ಒಂದು ಶತಕೋಟಿ ಡಾ.ವೆಚ್ಚದಲ್ಲಿ ಎರಡು ಸ್ಟೆಲ್ತ್ ಫ್ರಿಗೇಟ್ಗಳನ್ನು ಖರೀದಿಸುತ್ತಿದ್ದು,ಇವುಗಳಿಗೆ ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸಲಾಗುವುದು. ಎಆರ್ವಿಗಳನ್ನು ಡಿಆರ್ಡಿಒ ವಿನ್ಯಾಸಿಸಿ, ಅಭಿವೃದ್ಧಿಗೊಳಿಸಿದ್ದು,ಸರಕಾರಿ ಸ್ವಾಮ್ಯದ ಬಿಇಎಂಎಲ್ ಇವುಗಳನ್ನು ತಯಾರಿಸಲಿದೆ ಎಂದರು.