ಎಚ್‌ಐವಿ ಮುಕ್ತ ಸಮಾಜ ನಿರ್ಮಾಣವಾಗಲಿ: ಶೀಲಾ ಶೆಟ್ಟಿ

ಉಡುಪಿ, ಡಿ.1: ಏಡ್ಸ್ ರೋಗದ ಕುರಿತಂತೆ ಜನಜಾಗೃತಿ ಮೂಡಿಸಿ, ಎಚ್‌ಐವಿ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.
ಶನಿವಾರ ಬ್ರಹ್ಮಾವರದ ಎಸ್‌ಎಂಎಸ್ ಪ.ಪೂ.ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೆಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ನಾಗರಿಕ ಸಹಾಯವಾಣಿ ಕೇಂದ್ರ ಜಿಲ್ಲಾಸ್ಪತ್ರೆ ಉಡುಪಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ/ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ಇಂದು ನಡೆದ ವಿಶ್ವ ಏಡ್ಸ್ ದಿನದ ಬೃಹತ್ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಏಡ್ಸ್ ರೋಗವು ಸಮಾಜವನ್ನು ಕಾಡುವ ಅತ್ಯಂತ ಡೊಡ್ಡ ಪಿಡುಗಾಗಿದೆ. ಈ ರೋಗ ಇತರೆ ರೋಗಗಳಂತೆ ತಾನಾಗಿ ಬರುವುದಿಲ್ಲ. ಸ್ವಯಂಕೃತ ತಪ್ಪುಗಳಿಂದ ನಾವೇ ತಂದುಕೊಳ್ಳುವ ರೋಗ ಇದು. ಈ ರೋಗದ ನಿಯಂತ್ರಣ ಸಹ ನಮ್ಮಲ್ಲಿಯೇ ಇದೆ. ಆರೋಗ್ಯಕರ ದಾಂಪತ್ಯ ಜೀವನ ನಡೆಸುವುದರ ಮೂಲಕ ರೋಗ ನಿಯಂತ್ರಿಸಲು ಸಾಧ್ಯವಿದೆ. ಯುವ ಜನಾಂಗ ಈ ರೋಗದ ಕುರಿತು ಸಂಪೂರ್ಣ ಅರಿವು ಹೊಂದಿರಬೇಕು ಎಂದು ಶೀಲಾ ಶೆಟ್ಟಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಮಾತನಾಡಿ, ಪ್ರತಿ ವರ್ಷ ಡಿ.1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ‘ನಿಮ್ಮ ಎಚ್‌ಐವಿ ಸ್ಥಿತಿ ಅರಿಯಿರಿ’ ಎನ್ನುವುದಾಗಿದೆ. 2020ರ ವೇಳೆಗೆ ಎಚ್‌ಐವಿ ಕುರಿತು ಅನುಮಾನ ಹೊಂದಿರುವ ಶೇ.90 ಮಂದಿ ಅದರ ಸ್ಥಿತಿಯನ್ನು ಅರಿಯಬೇಕು ಎಂದರು.
ಎಚ್‌ಐವಿ ಹೊಂದಿರುವ ಶೇ.90 ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯಬೇಕು ಹಾಗೂ ಎಆರ್‌ಟಿ ಚಿಕಿತ್ಸೆ ಪಡೆಯುವ ಶೇ.90 ಜನರಲ್ಲಿ ರೋಗಾಣುಗಳ ತೀವ್ರತೆಯನ್ನು ಕಡಿಮೆಗೊಳಿಸುವ ಉದ್ದೇಶವಿದೆ. ಎಚ್‌ಐವಿ ಕುರಿತಂತೆ ದೇಶದಲ್ಲಿ ಕರ್ನಾಟಕ ರಾಜ್ಯವು 9 ಸ್ಥಾನದಲ್ಲಿದ್ದು, ಉಡುಪಿ 28ನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 35 ರೆಡ್ ರಿಬ್ಬನ್ ಕಾಲೇಜುಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ, ರಕ್ತದಾನ ಶಿಬಿರಗಳ ಆಯೋಜನೆ, ಗೊಂಬೆಯಾಟ ಪ್ರದರ್ಶನ ಮೂಲಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಉಡುಪಿ ಮತ್ತು ಕುಂದಾಪುರದಲ್ಲಿ ಎಆರ್‌ಟಿ ಕೇಂದ್ರಗಳಿದ್ದು, ಇದರಲ್ಲಿ ಎಚ್‌ಐವಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ ನಡೆಸಲಾಗುತ್ತದೆ ಎಂದು ಡಾ.ರೋಹಿಣಿ ತಿಳಿಸಿದರು.
ಉಡುಪಿ ಮತ್ತು ಕುಂದಾಪುರದಲ್ಲಿ ಎಆರ್‌ಟಿ ಕೇಂದ್ರಗಳಿದ್ದು, ಇದರಲ್ಲಿ ಎಚ್‌ಐವಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ ನಡೆಸಲಾಗುತ್ತದೆ ಎಂದು ಡಾ.ರೋಹಿಣಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎಚ್‌ಐವಿ ರೋಗದ ನಿಯಂತ್ರಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಂಡ್ಲೂರು ಪಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಲತಾನಾಯಕ್, ಉಡುಪಿ ರಕ್ತ ನಿಧಿ ಕೇಂದ್ರದ ಶಾಲಿನಿ, ಆಪ್ತ ಸಮಾಲೋಚಕಿ ರೋಶನಿ ಡಯಾಸ್, ಲ್ಯಾಬ್ ಟೆಕ್ನಿಶಿಯನ್ ಕಿರಣ್‌ಕುಮಾರ್, ಆಸರೆ ಸಂಸ್ಥೆಯ ಸಂಜೀವ ವಂಡ್ಸೆ ಇವರನ್ನು ಸನ್ಮಾನಿಸಲಾಯಿತು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಕುಸುಮ ಪೂಜಾರ್ತಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್ ಚಂದ್ರ ನಾಯಕ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಎಸ್‌ಎಂಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ರೆ.ಫಾ.ಎಲ್ಡೋ ಎಂ.ಪೌಲ್, ಪ್ರಾಂಶುಪಾಲ ಐವನ್ ದೊನಾಥ ಸುವಾರಿಸ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಅಜಿತ್ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಇದಕ್ಕೆ ಮುನ್ನ ಎಸ್‌ಎಂ.ಎಸ್ ಪದವಿ ಪೂರ್ವ ಕಾಲೇಜಿನಿಂದ ಬ್ರಹ್ಮಾವರ ನಗರದವರೆಗೆ ವಿದ್ಯಾರ್ಥಿಗಳ ಬೃಹತ್ ಜಾಥಾ ನಡೆಯಿತು. ಎಚ್‌ಐವಿ ಏಡ್ಸ್ ಕುರಿತು ಚಿಕ್ಕಮಗಳೂರು ಜಿಲ್ಲೆ ಅಂಬಳೆಯ ರೇಣುಕಾ ಮಾತೆ ತೊಗಲು ಗೊಂಬೆ ಮೇಳದಿಂದ ತೊಗಲು ಗೊಂಬೆ ಆಟ ನಡೆಯಿತು.
ಇದಕ್ಕೆ ಮುನ್ನ ಎಸ್‌ಎಂ.ಎಸ್ ಪದವಿ ಪೂರ್ವ ಕಾಲೇಜಿನಿಂದ ಬ್ರಹ್ಮಾವರ ನಗರದವರೆಗೆ ವಿದ್ಯಾರ್ಥಿಗಳ ಬೃಹತ್ ಜಾಥಾ ನಡೆಯಿತು. ಎಚ್‌ಐವಿ ಏಡ್ಸ್ ಕುರಿತು ಚಿಕ್ಕಮಗಳೂರು ಜಿಲ್ಲೆ ಅಂಬಳೆಯ ರೇಣುಕಾ ಮಾತೆ ತೊಗಲು ಗೊಂಬೆ ಮೇಳದಿಂದ ತೊಗಲು ಗೊಂಬೆ ಆಟ ನಡೆಯಿತು. ಆರೋಗ್ಯ ಇಲಾಖೆ ಮಾಬಳೇಶ್ ಸ್ವಾಗತಿಸಿ, ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.