ಹಿರಿಯ ಪತ್ರಕರ್ತ ಸುಕೇಶ್ ಕುಮಾರ್‌ಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ

ಮಂಗಳೂರು, ಡಿ. 1 : ಎರಡೂವರೆ ದಶಕಗಳ ಕಾಲ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಮಂಗಳೂರಿನ ಹಿರಿಯ ಪತ್ರಕರ್ತ ಸುಕೇಶ್ ಕುಮಾರ್ ಶೆಟ್ಟಿ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರಕಟವಾಗಿದೆ.
1996ರ ಫೆಬ್ರವರಿಯಲ್ಲಿ ಮಂಗಳೂರಿನ ಕರಾವಳಿ ಅಲೆ ಮೂಲಕ ಪತ್ರಕರ್ತರಾಗಿ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ಸುಕೇಶ್, 1997ರಿಂದ ಜನವಾಹಿನಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಬಳಿಕ 2000ದಲ್ಲಿ ಈಟಿವಿ ಕನ್ನಡದ ಉಪ ಸಂಪಾದಕರಾಗಿ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರ್ಯ ನಿರ್ವಹಿಸಿದರು. ಈಟಿವಿ ವರದಿಗಾರರಾಗಿ ಹಾಸನದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಮತ್ತೆ ಹೈದರಾಬಾದ್‌ಗೆ ಬುಲೆಟಿನ್ ಪ್ರೊಡ್ಯೂಸರ್ ಆಗಿ, 2006ರಲ್ಲಿ ಟಿವಿ9 ಕನ್ನಡ ಚಾನೆಲ್‌ನ ಆರಂಭಿಕ ಸಂಪಾದಕೀಯ ತಂಡದ ಪ್ರಮುಖರಾಗಿ ಸೇವೆ ಸಲ್ಲಿಸಿದರು.
2007ರಲ್ಲಿ ಸುವರ್ಣ ನ್ಯೂಸ್‌ನ ಮಂಗಳೂರಿನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಕೇಶ್, ಪ್ರಸ್ತುತ ಎರಡು ವರ್ಷಗಳಿಂದ ಕಸ್ತೂರಿ ನ್ಯೂಸ್ ಸುದ್ದಿ ವಾಹಿನಿಯಲ್ಲಿ ಮಂಗಳೂರನ್ನು ರಾಜ್ಯದಲ್ಲಿ ಪ್ರತಿನಿಧಿಸುತ್ತಿದ್ದಾರೆ.
ದೃಶ್ಯ ಮಾಧ್ಯಮದಲ್ಲಿ ನಾಡಿನ ಪ್ರಮುಖರಾಗಿರುವ ರವಿ ಕುಮಾರ್, ಹಮೀದ್ ಪಾಳ್ಯ, ಜಯಪ್ರಕಾಶ್ ಶೆಟ್ಟಿ, ರಂಗನಾಥ್ ಭಾರದ್ವಾಜ್, ರಾಧಿಕಾ ರಾಣಿ, ಗೌರೀಶ್ ಅಕ್ಕಿ ಸೇರಿದಂತೆ ಬಹುತೇಕ ಎಲ್ಲರ ಜೊತೆ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಖ್ಯಾತಿ ಸುಕೇಶ್ ಕುಮಾರ್ ಶೆಟ್ಟಿ ಅವರದ್ದು.
"ಒಂದು ಪತ್ರಿಕೆ, ಮೂರು ಚಾನೆಲ್"
90ರ ದಶಕದಲ್ಲಿ ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಜನವಾಹಿನಿ ಪತ್ರಿಕೆಯ ಆರಂಭದ ಸಂಪಾದಕೀಯ ತಂಡದಲ್ಲಿ ಅವಿಭಾಜ್ಯ ಅಂಗವಾಗಿದ್ದ ಸುಕೇಶ್ ಕುಮಾರ್, ನಾಡಿನ ಪ್ರಮುಖ ಮೂರು ಚಾನೆಲ್‌ಗಳ ಆರಂಭಿಕ ಸಂಪಾದಕೀಯ ತಂಡದ ಮುಖ್ಯ ಸದಸ್ಯರಾಗಿದ್ದರು ಎಂಬುದು ಗಮನಾರ್ಹ. ಈಟಿವಿ ಕನ್ನಡ ಸುದ್ದಿ ವಾಹಿನಿ, ಟಿವಿ9 ಕನ್ನಡ ಮತ್ತು ಸುವರ್ಣ ನ್ಯೂಸ್ ಚಾನೆಲ್‌ಗಳ ಆರಂಭದಲ್ಲಿ ಉತ್ತಮ ತಂಡವನ್ನು ಮುನ್ನಡೆಸುವ ಸಂಪಾಕೀಯ ತಂಡದಲ್ಲಿ ಒಬ್ಬರಾಗಿದ್ದವರು ಮಂಗಳೂರಿನ ಸುಕೇಶ್ ಕುಮಾರ್ ಶೆಟ್ಟಿ.