ನಾನೆಂದೂ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಹಾಸನದಲ್ಲಿ 1865 ಕೋ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ

ಹಾಸನ,ಡಿ.1: ನಾನು ಯಾವ ಕಾರಣಕ್ಕೂ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುವುದಿಲ್ಲ ಎಂದು ರಸ್ತೆ ಸಾರಿಗೆ ಹೆದ್ದಾರಿ ಮತ್ತು ಜಲಸಾರಿಗೆ, ಸಂಪನ್ಮೂಲ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣ ಬಳಿ 1865 ಕೋಟಿಗಳ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ಚಾಲನೆ ನೀಡಿ ಮತ್ತು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ. ಅತಿ ಮುಖ್ಯವಾಗಿ ಶಿರಾಡಿ ಘಾಟ್‍ನಲ್ಲಿ ಟರ್ನಾಲ್ ಮಾರ್ಗವನ್ನು ನಿರ್ಮಿಸಲಾಗುವುದು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು ಹೊರ ವರ್ತುಲ ರಸ್ತೆಯಾಗಿ ಷಟ್ಪದ ರಸ್ತೆ ನಿರ್ಮಿಸಲಾಗುವುದು. ಬಂದರು ಎಂದರೆ ನಮ್ಮ ನಾಡಿಗೆ ಎಂಜಿನ್ ಇದ್ದಂತೆ, ಆದ್ದರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶ. ನನ್ನ ಇಲಾಖೆಯಲ್ಲಿ ಯಾವುದೇ ರೀತಿಯಲ್ಲಿ ಹಣದ ಕೊರತೆ ಇಲ್ಲ. ದೇಶಕ್ಕೆ ಬೇಕಾಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಸನ್ನದ್ದವಾಗಿದೆ ಎಂದರು.
ಮೈಸೂರು ಬೆಂಗಳೂರು 117 ಕಿ.ಮೀ ರಸ್ತೆಯನ್ನು 7 ಸಾವಿರ ಕೋಟಿ ರೂಗಳಲ್ಲಿ 2 ಹಂತದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಬೆಂಗಳೂರು ಚೆನ್ನೈ ರಸ್ತೆಗೆ ಈಗಾಗಲೇ ಭೂಸ್ವಾದೀನ ಪ್ರಕ್ರಿಯೆ ನೆಡೆಯುತ್ತಿದ್ದು, ಇದಕ್ಕೆ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ನಮಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದು, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆಂದ ಅವರು, ಹಲವು ಉದ್ದೇಶಿತ ಕಾಮಗಾರಿಗಳ ಪಟ್ಟಿ ಸಲ್ಲಿಸಿದ್ದು, ನಾನೆಂದೂ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನುಡಿದರು.
ಹಾಸನಕ್ಕೆ ಬರುವ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ತಂದಿದೆ. ನಾನು ಅನೇಕ ಬಾರಿ ದೇವೇಗೌಡರ ಜೊತೆ ಕೆಲಸ ಮಾಡಿದ್ದೇನೆ. ಆದರೆ ಹಾಸನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಕರ್ನಾಟಕ ಒಂದು ಅಭಿವೃದ್ಧಿ ಶೀಲ ರಾಜ್ಯವಾಗಿದ್ದು, ಇಂದು ಕರ್ನಾಟಕ 7ಸಾವಿರಕ್ಕೂ ಹೆಚ್ಚು ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹೊಂದಿದ್ದು, ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಲವು ಉದ್ದೇಶಿತ ಕಾಮಗಾರಿಗಳ ಪಟ್ಟಿ ಸಲ್ಲಿಸಿದ್ದು, ಇನ್ನೂ ಕೆಲ ಯೋಜನೆಗಳು ಸದ್ಯದಲ್ಲೇ ಶುರುವಾಗಲಿವೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಕೇಂದ್ರದಲ್ಲಿ ಡೈನಾಮಿಕ್ ರಾಜಕಾರಣಿ ಎಂದರೆ ಅದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತ್ರ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 17 ಸಾವಿರ ಕೋಟಿ ರೂ. ಗಳನ್ನು ಬಿಡುಗಡೆ ಮಾಡಿರೋದು ಹೆಮ್ಮಯ ವಿಚಾರ. ಜೊತೆಗೆ ಮಂಗಳೂರು ಬೈಪಾಸ್‍ನಿಂದ ಹಾಸನ ನಗರಕ್ಕೆ 200 ಕೋಟಿ ವೆಚ್ಚದಲ್ಲಿ ಎಲಿವೆಟೆಡ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸಚಿವರು ಇದಕ್ಕೆ ಅನುಮತಿ ಕೊಡಿಸಿಕೊಡಬೇಕೆಂದು ವೇದಿಕೆಯಲ್ಲಿ ಮನವಿ ಮಾಡಿದ ಅವರು, ಕೇಂದ್ರದಿಂದ 4 ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 1865 ಕೋಟಿ ಚಾಲನೆ ನೀಡಿರುವುದಕ್ಕೆ ಋಣಿಯಾಗಿರುತ್ತೇನೆ. ಕೇಂದ್ರದ ಈ ರೀತಿಯ ಯಾವುದೇ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಮ್ಮ ರಾಜ್ಯ ಸರ್ಕಾರದ ಬೆಂಬಲವಿರುತ್ತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎನ್.ಸಿಂಗ್, ಮಂಡ್ಯ ಲೋಕಸಭಾ ಸದಸ್ಯ ಶಿವರಾಮೇಗೌಡ, ಶಾಸಕರುಗಳಾದ ಪ್ರೀತಂ ಜೆ.ಗೌಡ, ಎ.ಟಿ.ರಾಮಸ್ವಾಮಿ, ಲಿಂಗೇಶ್, ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣೇಗೌಡ, ಎಂ.ಎಲ್.ಸಿ.ಗೋಪಾಲಸ್ವಾಮಿ, ಕೇಂದ್ರದ ವಿವಿಧ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಐಜಿಪಿ ಶರತ್ ಚಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಅಪರ ಜಿಲ್ಲಾಧಿಕಾರಿ ವೈಶಾಲಿ, ಉಪವಿಭಾಗಧಿಕಾರಿ ಹೆಚ್.ಎಲ್. ನಾಗರಾಜು ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು. ರೋಹನ್ ಐಯ್ಯರ್ ರವರ ಸುಮಧರ ಗೀತೆಗಳು ಪ್ರೇಕ್ಷಕರ ಮನಸೆಳೆಯಿತು.







