ಬೆಳ್ತಂಗಡಿ: ಮಿಲಾದ್ ಸ್ನೇಹಕೂಟದ ಉದ್ಘಾಟನೆ

ಬೆಳ್ತಂಗಡಿ, ಡಿ. 1: ಭಾರತದ ಸಂವಿಧಾನವು ಎಲ್ಲ ಧರ್ಮದವರಿಗೂ ಭಾಷೆಯವರಿಗೂ ಸಮಾನತೆಯಿಂದ ಬದುಕುವ ಅವಕಾಶವನ್ನು ನೀಡಿದೆ. ದೇಶದಲ್ಲಿನ ಸೌಹಾರ್ದತೆಯ ವಾತಾವರಣವನ್ನು ಕೆಡಿಸುವ ಪ್ರಯತ್ನಗಳನ್ನು ಎಲ್ಲರೂ ಒಟ್ಟಾಗಿ ಸೋಲಿಸಬೇಕಾಗಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಎಸ್.ಎಂ.ಎ ಪುತ್ತೂರು ಜಿಲ್ಲಾ ಸಮ್ಮೇಳನ ಹಾಗೂ ಮಿಲಾದ್ ಕಾನ್ಫರೆನ್ಸ್ ಭಾಗವಾಗಿ ಏರ್ಪಡಿಸಲಾಗಿದ್ದ ಮಿಲಾದ್ ಸ್ನೇಹಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಎಲ್ಲ ಧರ್ಮಗಳೂ ಶಾಂತಿ ಸಹೋದರತೆಯನ್ನೇ ಸಾರಿದೆ. ದೇಶದ ಬಹುತೇಕ ಜನರೂ ಅದನ್ನೇ ಬಯಸುತ್ತಾರೆ, ಆದರೆ ಕೆಲವು ದುಷ್ಟ ಶಕ್ತಿಗಳು ಅದನ್ನು ಹಾಳುಗೆಡವಲು ಸದಾ ಪ್ರಯತ್ನಿಸುತ್ತಿರುತ್ತಾರೆ ಅವರ ಬಗ್ಗೆ ಎಚ್ಚರವಾಗಿರಬೇಕಾದ ಅಗತ್ಯವಿದೆ, ಎಂದರು. ಇಸ್ಲಾಂ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದೆ ಎಂದ ಅವರು ಒಂದೇ ತಾಯಿಯ ಮಕ್ಕಳಂತೆ ಎಲ್ಲರೂ ಒಟ್ಟಾಗಿ ಬದುಕುವಂತಹ ವಾತಾವರಣ ನಿರ್ಮಿಸಲು ಪ್ರಯತ್ನಿಸೋಣ ಎಂದರು.
ಸಂಘಟನೆಯ ರಾಜ್ಯ ನಾಯಕರಾದ ಯಾಕೂಬ್ ಸಅದಿ ಅವರು ಸಂದೇಶ ಭಾಷಣ ಮಾಡಿದರು. ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಬೆಳ್ತಂಗಡಿಯ ನ್ಯಾಯವಾದಿ ಪ್ರಸಾದ್ ಕುಮಾರ್ ಮಾತನಾಡಿ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಕೆ ಬದ್ರುದ್ದೀನ್ ಗುರುವಾಯನಕೆರೆ ವಹಿಸಿದ್ದರು.
ಸಭಾಕಾರ್ಯಕ್ರಮಕ್ಕೂ ಮೊದಲು ಬೆಳ್ತಂಗಡಿ ನಗರದಲ್ಲಿ ಆಕರ್ಷಕ ಮಿಲಾದ್ ರ್ಯಾಲಿ ನಡೆಯಿತು. ಬೆಳ್ತಂಗಡಿ ಸುನ್ನಿ ಸಂಯುಕ್ತ ಜಮಾತಿನ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ರ್ಯಾಲಿಗೆ ಚಾಲನೆ ನೀಡಿದರು, ಜಿಲ್ಲಾ ಕಾನ್ಫರೆನ್ಸಿನ ಸ್ವಾಗತ ಸಮಿತಿಯ ಚೆಯರ್ಮಾನ್ ಅಹ್ಮದ್ ಎ.ಕೆ ಧ್ವಜ ಸ್ವೀಕಾರ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಂ.ಎ ಪುತ್ತೂರು ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಕೊಡಂಗ್ಯಾ, ಸಾದಾತ್ ತಂಙಳ್ ಕರುವೇಲು, ಕಾಸೀಂ ಮುಸ್ಲಿಯಾರ್ ಮಾಚಾರು, ಯಾಕೂಬ್ ಮುಸ್ಲಿಯಾರ್ ಪಣಕಜೆ, ಇಬ್ರಾಹಿಂ ಸಖಾಫಿ, ಯೂಸುಫ್ ಸಾಜ, ಯೂಸುಫ್ ರಾಝಾ ಅಂಜದಿ, ಮೆಹಬೂಬ್ ಸಂಜಯನಗರ, ಅಬ್ಬೋನು ಮದ್ದಡ್ಕ ಹಾಗೂ ಇತರರು ಉಪಸ್ಥಿತರಿದ್ದರು. ಎಸ್.ಎಂ.ಎ ರಾಜ್ಯ ಕಾರ್ಯದರ್ಶಿ ಸ್ವಾಧಿಕ್ ಮಾಸ್ಟರ್ ಸ್ವಾಗತಿಸಿದರು, ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು, ಅಶ್ರಫ್ ಹಿಮಮಿ ವಂದಿಸಿದರು.