ಗಜ ಚಂಡಮಾರುತ: ತಮಿಳುನಾಡಿಗೆ 353 ಕೋ. ರೂ. ಬಿಡುಗಡೆಗೆ ಕೇಂದ್ರ ಅನುಮೋದನೆ
![ಗಜ ಚಂಡಮಾರುತ: ತಮಿಳುನಾಡಿಗೆ 353 ಕೋ. ರೂ. ಬಿಡುಗಡೆಗೆ ಕೇಂದ್ರ ಅನುಮೋದನೆ ಗಜ ಚಂಡಮಾರುತ: ತಮಿಳುನಾಡಿಗೆ 353 ಕೋ. ರೂ. ಬಿಡುಗಡೆಗೆ ಕೇಂದ್ರ ಅನುಮೋದನೆ](https://www.varthabharati.in/sites/default/files/images/articles/2018/12/1/166000.jpg)
ಹೊಸದಿಲ್ಲಿ, ಡಿ. 1: ಕಳೆದ ತಿಂಗಳು ಬೀಸಿದ ಗಜ ಚಂಡ ಮಾರುತದಿಂದ ಉಂಟಾದ ಹಾನಿಗೆ ನೆರವು ನೀಡಲು ತಮಿಳುನಾಡಿಗೆ 353.70 ಕೋ. ರೂ. ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
2018-19ನೇ ವರ್ಷಕ್ಕೆ 353.70 ಕೋ. ರೂ. ಮೊತ್ತದ ರಾಜ್ಯ ವಿಕೋಪ ಸ್ಪಂದನ ನಿಧಿಯ ಮುಖ್ಯ ಪಾಲಿನ ಒಂದು ಭಾಗವಾದ ಎರಡನೇ ಕಂತು ಬಿಡುಗಡೆ ಮಾಡಲು ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಸಂತ್ರಸ್ತ ಜನರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತಮಿಳುನಾಡಿಗೆ ನೆರವು ನೀಡಲು ಮಧ್ಯಂತರ ಪರಿಹಾರವಾಗಿ ಈ ಮೊತ್ತ ಬಿಡುಗಡೆ ಮಾಡಲಾಗಿದೆ.
ಇನ್ನಷ್ಟು ನೆರವನ್ನು ಅಂತರ್ ಸಚಿವರ ಕೇಂದ್ರ ತಂಡ (ಐಎಂಸಿಟಿ) ನೀಡುವ ಅಂತಿಮ ವರದಿಯ ಆಧಾರದಲ್ಲಿ ರಾಷ್ಟ್ರೀಯ ವಿಕೋಪ ಸ್ಪಂದನಾ ನಿಧಿ (ಎನ್‌ಡಿಆರ್‌ಎಫ್) ನೀಡಲಿದೆ. ನವೆಂಬರ್ 15ರಂದು ರಾತ್ರಿ ಹಾಗೂ ನವೆಂಬರ್ 16ರಂದು ಮುಂಜಾನೆ ತಮಿಳುನಾಡು ತೀವ್ರ ಚಂಡಮಾರುತ ಗಾಜಾಕ್ಕೆ ತುತ್ತಾಗಿತ್ತು. ಗಾಜಾದಿಂದ ರಾಜ್ಯದ 12 ಜಿಲ್ಲೆಗಳು ಗಂಭೀರ ತೊಂದರೆಗೆ ಒಳಗಾಗಿದ್ದವು.