ಭೂಗಳ್ಳರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ನಗರ ಡಿಸಿ: 150 ಕೋಟಿ ರೂ.ಮೌಲ್ಯದ ಆಸ್ತಿ ವಶ

ಬೆಂಗಳೂರು, ಡಿ.1: ಸರಕಾರ ಅದೆಷ್ಟೋ ಕಾನೂನು ರೂಪಿಸಿದ್ದರೂ ಭೂಗಳ್ಳರು ಮಾತ್ರ ಅವರ ಚಾಳಿ ಬಿಡಲಿಲ್ಲ. ಅದಕ್ಕಾಗಿಯೇ ಸರಕಾರದ ಕೆಲ ಖಡಕ್ ಅಧಿಕಾರಿಗಳು ಚಾಳಿ ಬಿಡದ ಭೂಗಳ್ಳರಿಗೆ ಬಿಸಿ ಮುಟ್ಟಿಸಿದ್ದಾರೆ.
ಸಂಘಟನೆಗಳ ಹೆಸರಲ್ಲಿ ಸಾರ್ವಜನಿಕ ಭೂಮಿಗಳಿಗೆ ಬೇಲಿ ಹಾಕಿ ಮೆರೆಯುತ್ತಿದ್ದವರಿಗೆ ಬೆಂಗಳೂರು ನೂತನ ಜಿಲ್ಲಾಧಿಕಾರಿ ವಿಜಯ್ ಶಂಕರ್ ಸರಿಯಾಗಿ ಪಾಠ ಕಲಿಸಿದ್ದಾರೆ. ಶನಿವಾರ ರಾಜಧಾನಿಯ ಹೊರವಲಯದ ಹಲವೆಡೆ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡಗಳು ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಆಸ್ತಿ ವಶಕ್ಕೆ ಪಡೆದಿದ್ದಾರೆ. ಭೂಗಳ್ಳರು ರಾಜ್ಯ ರಾಜಧಾನಿ ಸುತ್ತಮುತ್ತಲಿರುವ ಯಲಹಂಕ, ರಾಮಗೊಂಡನಹಳ್ಳಿ, ಬ್ಯಾಟರಾಯನಪುರ, ಬೆಟ್ಟಹಲಸೂರು ಸೇರಿದಂತೆ ನಾಲ್ಕು ಕಡೆ ಸರಕಾರಿ ಭೂಮಿ ಒತ್ತುವರಿ ಮಾಡಿ ಬೇಲಿ ಹಾಕಿ ಮೆರೆಯುತ್ತಾ ಇದ್ದರು. ಎಷ್ಟು ಬಾರಿ ತಿಳಿ ಹೇಳಿದರೂ ಅಸಡ್ಡೆಯಿಂದ ಮಾತನಾಡುತ್ತಿದ್ದರು. ಆದರೆ ಇದೀಗ ಬಿಸಿ ಮುಟ್ಟಿಸಿ ಸರಕಾರದ ಮೊಹರು ಒತ್ತುವ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರು ಒಂದೇ ದಿನ ಸುಮಾರು 150 ಕೋಟಿ ಬೆಲೆ ಬಾಳುವ 14 ಎಕರೆ ಸರಕಾರಿ ಜಾಗ ವಶಕ್ಕೆ ಪಡೆದು, ನಮಗೆ ಯಾರು ಹೆಚ್ಚಲ್ಲ, ಯಾವ ಪ್ರಭಾವಕ್ಕೂ ಬಗ್ಗಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸರಕಾರಿ ದಾಖಲೆಗಳ ಪ್ರಕಾರ ಬೆಂಗಳೂರು ಉತ್ತರ ತಾಲೂಕಿನ ಹಲವು ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಡಳಿತ, ಸೂಕ್ತ ದಾಖಲೆಗಳ ಪ್ರಕಾರ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದವರಿಗೆ ಖಾಲಿ ಮಾಡುವಂತೆ ಸೂಚನೆ ನೀಡಿತ್ತು. ಆದರೂ ಯಾರು ಬರುತ್ತಾರೆ ನೋಡೋಣ ಎಂದು ಮೀಸೆ ತಿರುಗಿಸುತ್ತಿದ್ದವರಿಗೆ ಜಿಲ್ಲಾಡಳಿತ ಬೆವರಿಳಿಸಿದೆ.
ಈ ಮೂಲಕ ಸರಕಾರಿ ಭೂಮಿ ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಸೀಮಿತ ಎಂದು ಜಿಲ್ಲಾಧಿಕಾರಿಗಳು ಸಾರಿದ್ದಾರೆ. ಇನ್ನು ಗ್ರಾಮಾಂತರ ಮತ್ತು ಅಪರ ತಾಲೂಕುಗಳಲ್ಲಿ ಸಾಕಷ್ಟು ಜಾಗ ಒತ್ತುವರಿ ಆಗಿದ್ದು, ಸರಕಾರಿ ಜಮೀನು ಉಳಿಸೇ ಉಳಿಸುತ್ತೇವೆ ಎಂದು ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ.







