ಇದೀಗ ಭಾರತದಲ್ಲಿ ಆನ್ ಲೈನ್ ನಲ್ಲಿ ಸಿಗುತ್ತೆ ‘ಶುದ್ಧ ಗಾಳಿ’!
10 ಲೀಟರ್ ಗಾಳಿಗೆ ಎಷ್ಟು ರೂ. ಗೊತ್ತಾ?

ಹೊಸದಿಲ್ಲಿ, ಡಿ.1: ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ನಾಶವಾಗುತ್ತಾ ಬಂದಂತೆ ಅದು ಮನುಷ್ಯನ ಸಂಕಷ್ಟ, ಅವನತಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಸುದ್ದಿ ಸರಿಯಾದ ಉದಾಹರಣೆ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ದಿಲ್ಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿದೆ. ಪ್ರಕೃತಿಯ ಮೇಲೆ ಮನುಷ್ಯನ ಪ್ರಹಾರ ಹೀಗೆ ಮುಂದುವರಿದಲ್ಲಿ ನೀರಿನಂತೆ ಇನ್ನು ಮುಂದೆ ಗಾಳಿಯನ್ನೂ ಮಾರಬೇಕಾಗಿ ಬರಬಹುದು ಎನ್ನುವ ಮಾತೊಂದಿತ್ತು. ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿರುವ ಕೆಲ ದೇಶಗಳಲ್ಲಿ ಗಾಳಿಯನ್ನು ಮಾರಲಾಗುತ್ತದೆ. ಆದರೆ ದುರಂತವೆಂದರೆ ಇದೀಗ ದೇಶದ ರಾಜಧಾನಿ ದಿಲ್ಲಿಯಲ್ಲಿ ಗಾಳಿಯನ್ನು ಬಾಟಲ್ ಗಳಲ್ಲಿ ಮಾರಲಾಗುತ್ತಿದೆ.
ಔಝೈರ್, ವಿಟಾಲಿಟಿ ಏರ್ ಹಾಗು ಪ್ಯೂರ್ ಹಿಮಾಲಯನ್ ಏರ್ ಸೇರಿದಂತೆ ಹಲವು ಕಂಪೆನಿಗಳು ಗಾಳಿಯನ್ನು ಬಾಟಲ್ ಗಳಲ್ಲಿ ಮಾರಲು ಆರಂಭಿಸಿವೆ. ಪ್ಯೂರ್ ಹಿಮಾಲಯನ್ ಏರ್ 10 ಲೀಟರ್ ಗಾಳಿಯನ್ನು 550 ರೂ.ಗೆ ಮಾರುತ್ತಿದೆ. ಆಸ್ಟ್ರೇಲಿಯಾ ಮೂಲದ ಬ್ರಾಂಡ್ ಔಝೈರ್ 7.5 ಲೀಟರ್ ಗಾಳಿಯನ್ನು 1,500 ರೂ.ಗೆ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದೆ.







