ಡಿ.2ರಂದು ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಅಭಿಯಾನ-ಸಮಾರೋಪ ಸಮಾರಂಭ
ಬೆಂಗಳೂರು, ಡಿ.1: ‘ಪ್ರವಾದಿ ಮುಹಮ್ಮದ್ ಪೈಗಂಬರ್-ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ’ ಅಭಿಯಾನದ ಸಮಾರೋಪ ಸಮಾರಂಭವನ್ನು ಡಿ.2ರಂದು ಬೆಳಗ್ಗೆ 10.30ಕ್ಕೆ ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾಗಿದೆ.
ಪ್ರವಾದಿ ಮುಹಮ್ಮದ್ ಪೈಂಗಬರರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ನಾಡಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ‘ಪ್ರವಾದಿ ಮುಹಮ್ಮದ್-ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಧ್ಯೇಯ ವಾಕ್ಯದಡಿ ರಾಜ್ಯವ್ಯಾಪಿ ಅಭಿಯಾನವು ನ.16ರಿಂದ ನ.30ರವರೆಗೆ ನಾಡಿನಾದ್ಯಂತ ಯಶಸ್ವಿಯಾಗಿ ಜರುಗಿತು. ಈ ಹಿನ್ನೆಲೆಯಲ್ಲಿ ಸಮಾರಂಭ ಏರ್ಪಡಿಸಲಾಗಿದೆ.
ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ವಕ್ತಾರರಾದ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ ಸಾಹೇಬ್‌ರವರ ಅಧ್ಯಕ್ಷತೆಯಲ್ಲಿ ‘ಪ್ರವಾದಿ ಮುಹಮ್ಮದರ ಮಾನವೀಯ ಶಿಕ್ಷಣಗಳು-ಪ್ರಸ್ತುತತೆ’ ವಿಚಾರಗೋಷ್ಟಿ ಜರುಗಲಿದ್ದು, ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್‌ಗೌಡ, ಬೆಂಗಳೂರು ವಿವಿಯ ಉಪಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಕರ್ನಾಟಕ ಸದ್ಭಾವನ ವೇದಿಕೆ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ವಸ್ತು ಪ್ರದರ್ಶನ ಹಾಗೂ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ.







