ಅತ್ಯಾಚಾರ, ಜಾತಿನಿಂದನೆ ಪ್ರಕರಣ: ಆರೋಪಿಗೆ 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬೆಂಗಳೂರು, ಡಿ.1: ಯುವತಿ ಮೇಲೆ ಅತ್ಯಾಚಾರವೆಸಗಿ, ಜಾತಿನಿಂದನೆ ಮಾಡಿದ್ದ ಆರೋಪಿಗೆ 70ನೆ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿದೆ.
2017ರ ಎಪ್ರಿಲ್ 28ರಂದು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 22 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಜಾತಿ ನಿಂದನೆ ಮಾಡಿದ್ದ ಆರೋಪಿ ಲೇಪಾಕ್ಷಿ (27) ಎಂಬಾತ ಶಿಕ್ಷೆಗೊಳಗಾದವನು ಎಂದು ತಿಳಿದುಬಂದಿದೆ.
ತನ್ನ ಮೇಲೆ ಅತ್ಯಾಚಾರವೆಸಗಿ, ಮೋಸಮಾಡಿ ಜಾತಿ ನಿಂದನೆ ಮಾಡಿದ್ದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ಥೆಯು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್ ಆರೋಪಿಯನ್ನು ಬಂಧಿಸಿ, ಈತನ ವಿರುದ್ಧ ನಗರದ 70ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು 71ನೆ ಸಿಸಿಎಚ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರಕಾರದ ಅಭಿಯೋಜಕರಾದ ಮೀನಾಕುಮಾರಿ ಅವರು ಅಭಿಯೋಗ ಪರವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿ ಲೇಪಾಕ್ಷಿಗೆ 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.







