ದೇವಸ್ಥಾನ ಕಳವು ಪ್ರಕರಣ: ಅಂತರ್ ಜಿಲ್ಲಾ ಕಳವು ಆರೋಪಿ ಬಂಧನ

ಉಡುಪಿ, ಡಿ.1: ಅವಿಭಜಿತ ದ.ಕ. ಜಿಲ್ಲೆಯ ದೇವಸ್ಥಾನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಕಳವು ಆರೋಪಿಯೋರ್ವನನ್ನು ಉಡುಪಿ ಡಿಸಿಐಬಿ ಪೊಲೀಸರು ನ. 28ರಂದು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನರ ಸಿಂಹರಾಜು ಯಾನೆ ಬಸವರಾಜು ಯಾನೆ ರಾಜು (41) ಬಂಧಿತ ಆರೋಪಿ. ಈತನಿಂದ ಕಳವು ಮಾಡಿರುವ 2.07ಲಕ್ಷ ರೂ. ಮೌಲ್ಯದ ಸುಮಾರು 7 ಕೆ.ಜಿ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಉಡುಪಿ ಜಿಲ್ಲೆಯ ಬ್ರಹ್ಮಾವರ ಕೀಳಿಂಜೆ ಶ್ರೀಮಹಾವಿಷ್ಣು, ಶ್ರೀಮಹಾ ಲಿಂಗೇಶ್ವರ ದೇವಸ್ಥಾನ, ಕಾರ್ಕಳ ನಿಂಜೂರು ಗುರು ನಿತ್ಯಾನಂದ ಭಜನಾ ಮಂದಿರ, ಶಿವಪುರ ಯಡ್ಡೆ ಬ್ರಹ್ಮಬೈದರ್ಕಳ ಗರಡಿ ಹಾಗೂ ಕಾರ್ಕಳ ಎಣ್ಣೆ ಹೊಳೆ ಶ್ರೀಗಣೇಶ ಮಂದಿರಗಳಲ್ಲಿ ಕಳ್ಳತನ ಮಾಡಿದ್ದನು. ಆರೋಪಿ ಮತ್ತು ಸೊತ್ತುಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಈತ ಈ ಹಿಂದೆ ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದು, ಉಡುಪಿ ಜಿಲ್ಲೆಯಲ್ಲಿ 4 ದೇವಸ್ಥಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆ 10 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. 14 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ ಈತ, ವಾರೆಂಟ್ ಆಸಾಮಿಯಾಗಿದ್ದಾನೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ.ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಟಿ.ಆರ್ ಜೈಶಂಕರ್ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಡಿಸಿಐಬಿ ಎಎಸ್ಸೈ ರವಿಚಂದ್ರ, ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ ಕೆ., ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ಶಿವಾನಂದ ಪೂಜಾರಿ, ರಾಜ್‌ಕುಮಾರ್, ದಯಾನಂದ ಪ್ರಭು ಮತ್ತು ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.