ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಪತ್ರಕರ್ತನ ವಿರುದ್ಧ 16 ಕೇಸು ದಾಖಲು

ಕುಂದಾಪುರ, ಡಿ.1: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧಿತನಾಗಿರುವ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ (40) ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ.
ಆರೋಪಿ ವಿರುದ್ಧ ನಿನ್ನೆಯವರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಬಾಲಕರು ನೀಡಿದ ದೂರಿನಂತೆ 11 ಪ್ರಕರಣಗಳು ದಾಖಲಾಗಿದ್ದವು. ಇಂದು ಮತ್ತೆ ಮೂವರು ಬಾಲಕರು ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೀಗೆ ಬೈಂದೂರು ಠಾಣೆಯಲ್ಲಿ 14 ಪ್ರಕರಣ ಗಳು ದಾಖಲಾಗಿವೆ.
ಅಲ್ಲದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮುಂದೆ ಇನ್ನಷ್ಟು ಸಂತ್ರಸ್ತ ಬಾಲಕರು ಆರೋಪಿ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬೈಂದೂರು ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿ ಚಂದ್ರ ಹೆಮ್ಮಾಡಿ ವಿಚಾರಣೆ ಮುಂದುವರೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಇವರು ತನ್ನ ಶಾಲೆಯ ಮಕ್ಕಳ ಮೇಲೆಯೂ ಚಂದ್ರ ಹೆಮ್ಮಾಡಿ ದೌರ್ಜನ್ಯ ಎಸಗಿದ್ದ ಎಂಬ ವಿಚಾರದಲ್ಲಿ ಮನನೊಂದು ಆತ್ಮ ಹತ್ಯೆಗೆ ಯತ್ನಿಸಿರುವ ಬಗ್ಗೆ ಗಾಳಿಸುದ್ದಿಗಳು ಹರಡುತ್ತಿವೆ. ಆತ್ಮಹತ್ಯೆಗೆ ಯತ್ನಿಸಿ ರುವ ಶಿಕ್ಷಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪೊಲೀಸರು ಶಿಕ್ಷಕರ ಆತ್ಮಹತ್ಯೆಗೆ ಯತ್ನದ ಕಾರಣವನ್ನು ತಳ್ಳಿ ಹಾಕಿದ್ದಾರೆ.