ಕಳವು ಪ್ರಕರಣ: ಆರೋಪಿ ಬಂಧನ; ಚಿನ್ನಾಭರಣ ವಶ
ಮಂಗಳೂರು, ಡಿ.1: ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಯೊಂದರಲ್ಲಿನ ಕಳವು ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 2. 20ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಕುಂಬಾರ ಕೊಪ್ಪಲ ನಿವಾಸಿ ನವೀನ್‌ಕುಮಾರ್ (29) ಬಂಧಿತ ಆರೋಪಿ.
ಈತನ ಮೇಲೆ ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿದ್ದು, ದಸ್ತಗಿರಿಯಾಗಿ ಜೈಲಿನಲ್ಲಿದ್ದು ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಆರೋಪಿಯಿಂದ 120 ಗ್ರಾಂ ತೂಕದ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಪ್ರಕರಣ ವಿವರ: ಮೋಹನ್ ಭಂಡಾರಿ ಎಂಬವರು ಆ.24ರಂದು ರಾತ್ರಿ 9:15ಕ್ಕೆ ಮನೆಗೆ ಬೀಗ ಹಾಕಿ ಬೆಂಗಳೂರಿನಲ್ಲಿರುವ ಮಗ ಮತ್ತು ಹೆಂಡತಿಯನ್ನು ಕಾಣಲು ಹೋಗಿದ್ದರು. ಸೆ.12ರಂದು ಮಧ್ಯಾಹ್ನ 2:30ಕ್ಕೆ ಮರಳಿ ಮನೆಗೆ ಬಂದಿದ್ದು, ಈ ನಡುವೆ ಮನೆಯ ಗೋಡ್ರೇಜ್‌ನ ಲಾಕರ್‌ನಲ್ಲಿರಿಸಿದ್ದ 120 ಗ್ರಾಂ ತೂಕದ ನಾನಾ ಮಾದರಿಯ ಚಿನ್ನಾಭರಣ ಮತ್ತು ವಿಜಯ ಬ್ಯಾಂಕ್ ಚೆಕ್ ಬುಕ್ ಕಳವಾದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರು ದಸ್ತಗಿರಿ ಮಾಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿಗಳಾದ ಭಾಸ್ಕರ್ ಒಕ್ಕಲಿಗೆ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕ, ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ ಎಲ್., ರಾಜೇಂದ್ರ ಹಾಗೂ ಮಂಗಳೂರು ದಕ್ಷಿಣ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







