ಬೆಳ್ತಂಗಡಿ: ಧ್ವಜ ವಿವಾದ; ಪೊಲೀಸರಿಂದ ತೆರವು
ಬೆಳ್ತಂಗಡಿ, ಡಿ. 1: ತಾಲೂಕಿನ ಪೆರಾಡಿ ಎಂಬಲ್ಲಿನ ಕಟ್ಟೆಯೊಂದರಲ್ಲಿ ಅನಧಿಕೃತವಾಗಿ ಹಾಕಿದ್ದಾರೆ ಎನ್ನಲಾದ ಭಗವಾಧ್ವಜವನ್ನು ಪೊಲೀಸರು ಶುಕ್ರವಾರ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಮತ್ತೆ ಹಾರಿಸಿದ್ದ ದ್ವಜವನ್ನು ಪೊಲೀಸರು ಶನಿವಾರ ತೆರವುಗೊಳಿಸಿದ್ದಾರೆ.
ಇದೀಗ ಖಾಸಗಿ ಜಮೀನಿನಲ್ಲಿ ಮತ್ತೆ ದ್ವಜವನ್ನು ಹಾರಿಸಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಮೀಸಲು ಪಡೆಯನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್.ಡಿ.ಪಿ.ಐ ಖಂಡನೆ
ಧ್ವಜದ ವಿವಾದದಲ್ಲಿ ಮಾತನಾಡುತ್ತಾ ತನಗೆ ಹಿಂದುತ್ವ ಮುಖ್ಯ ಎಂದು ಹೇಳಿ ಅದಕ್ಕೆ ಮಸೀದಿಯ ವಿಚಾರವನ್ನು ಎಳೆದು ತಂದು ತಾಲೂಕಿನಲ್ಲಿ ಅಶಾಂತಿ ಸೃಷ್ಟಿಸುವ ಕೀಳು ಮಟ್ಟದ ರಾಜಕೀಯಕ್ಕೆ ಶಾಸಕ ಹರೀಶ್ ಪೂಂಜಾ ಇಳಿದಿರುವುದು ಖಂಡನೀಯ ಎಂದು ಪಕ್ಷದ ತಾಲೂಕು ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ತಿಳಿಸಿದ್ದಾರೆ. ನೀವು ಹಿಂದುತ್ವಕ್ಕೆ ಬೇಕಾಗಿ ಮಾತ್ರ ಶಾಸಕನಾಗಿ ಬಂದಿಲ್ಲ ಸಂವಿಧಾನದ ಅಡಿಯಲ್ಲಿ ಶಾಸಕರಾಗಿದ್ದೀರಿ, ಅವರ ಹೇಳಿಕೆಯಿಂದಾಗಿ ತಾಲೂಕಿನಲ್ಲಿ ಯಾವುದೇ ರೀತಿಯ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಶಾಸಕರೇ ಹೊಣೆಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.