ಜೋಕರ್‌ನಂತೆ ರಾಹುಲ್ ಗಾಂಧಿ ಮಾತನಾಡುತ್ತಾರೆ: ಕೆಸಿಆರ್
ಹೈದರಾಬಾದ್, ಡಿ. 1: ಕಮಿಷನ್‌ಗಾಗಿ ತೆಲಂಗಾಣದಲ್ಲಿ ನೀರಾವರಿ ಯೋಜನೆಗಳನ್ನು ಮರು ವಿನ್ಯಾಸಗೊಳಿಸಲಾಯಿತು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ರಾವ್, ರಾಜ್ಯದ ಹಿತಾಸಕ್ತಿಗಾಗಿ ಸೀತಾರಾಮ ಹಾಗೂ ಇತರ ನೀರಾವರಿ ಯೋಜನೆಗಳನ್ನು ಮರು ವಿನ್ಯಾಸಗೊಳಿಸಲಾಯಿತು ಎಂದಿದ್ದಾರೆ. ನೀರಾವರಿ ವಲಯದಲ್ಲಿ ತೆಲಂಗಾಣದ ಹಿತಾಸಕ್ತಿಯನ್ನು ಕಾಂಗ್ರೆಸ್ ನಾಯಕನಿಗೆ ಈಡೇರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಬುದ್ಧಿವಂತರೋ ಅಲ್ಲವೋ, ದೇವರು ಅವರಿಗೆ ಬುದ್ಧಿವಂತಿಕೆ ನೀಡಿದ್ದಾರೊ ಇಲ್ಲವೋ, ಆದರೆ, ಅವರು ಜೋಕರ್‌ನಂತೆ ಮಾತನಾಡುತ್ತಾರೆ. ಕಮಿಷನ್‌ಗಾಗಿ ನಾವು ನೀರಾವರಿ ಯೋಜನೆ ಮರು ವಿನ್ಯಾಸಗೊಳಿಸಿದೆವು ಎಂದು ಅವರು ಹೇಳುತ್ತಿದ್ದಾರೆ ಎಂದರು. “ರಾಹುಲ್ ಗಾಂಧಿ ನೀವು ಬರುತ್ತೀರಾ?, ನಿಮಗೆ ಧೈರ್ಯ ಇದೆಯೇ ?, ನಾವು ರುದ್ರಮಕೂಟಕ್ಕೆ ಹೋಗೋಣವೇ ?, ನಾವು ನೋಡೋಣವೇ ?, ರಾಜೀವ್ ಸಾಗರ್, ಇಂದಿರಾ ಸಾಗರ್ ಹೇಗಿದೆ ಗೊತ್ತಿದೆಯೇ ?, ನಾನು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ. ನಿಷ್ಪ್ರಯೋಜಕ ಆರೋಪ ಮಾಡಬೇಡಿ ಎಂದು ರಾವ್ ಹೇಳಿದ್ದಾರೆ. ನಮಗೆ ಬೇಕಾದ ಯೋಜನೆಯನ್ನು ನಾವು ನಿರ್ಮಿಸಿದ್ದೇವೆ. ನಿಮಗೆ ಕಮಿಷನ್ ಅಗತ್ಯ ಇದೆಯೇ ?, ನೀವು ಬಯಸಿದರೆ, ನಾನು ನಿಮಗೆ ಕಮಿಷನ್ ನೀಡುತ್ತೇನೆ. ಯಾರಿಗೆ ಬೇಕು ಕಮಿಷನ್ ?, ನಿಮ್ಮಂತೆ ಕಮಿಷನ್‌ಗಾಗಿ ಇರುವ ಬದುಕು ನಮ್ಮದಲ್ಲ. ನಮ್ಮ ಬದುಕು ಒಂದು ಹೋರಾಟ ಎಂದು ಚಂದ್ರಶೇಖರ್ ರಾವ್ ಹೇಳಿದ್ದಾರೆ.