ಲೋಕಪಾಲ್ ನಿಯೋಜಿಸದೇ ಇದ್ದರೆ ಜನವರಿ 30ರಿಂದ ಉಪವಾಸ ಧರಣಿ: ಅಣ್ಣಾ ಹಝಾರೆ

ಮುಂಬೈ, ನ. 1: ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಪಾಲ್ ಅನ್ನು ನಿಯೋಜಿಸದೇ ಇದ್ದರೆ, ಜನವರಿ 30ರಿಂದ ತನ್ನ ಹಳ್ಳಿಯಲ್ಲಿ ಉಪವಾಸ ಮುಷ್ಕರ ಆರಂಭಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಶನಿವಾರ ಹೇಳಿದ್ದಾರೆ.
ಕೇಂದ್ರದಲ್ಲಿ ಲೋಕಪಾಲ್ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವನ್ನು ತಪ್ಪಿಸಲು ಎನ್‌ಡಿಎ ನೆಪ ಹೇಳುತ್ತಿದೆ ಎಂದು ಹಝಾರೆ ಪ್ರಧಾನಿ ಮಂತ್ರಿ ಕಚೇರಿಗೆ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು (ಆಯ್ಕೆ ಪ್ರಕ್ರಿಯೆಯ ಒಂದು ಭಾಗವಾದವರು) ಇಲ್ಲದಿರುವುದರಿಂದ ಲೋಕಪಾಲ್ ನಿಯೋಜನೆ ಸಾಧ್ಯವಾಗಿಲ್ಲ ಎಂದು ಮೊದಲು ನರೇಂದ್ರ ಮೋದಿ ಸರಕಾರ ಹೇಳಿತ್ತು. ಅನಂತರ ಆಯ್ಕೆ ಸಮಿತಿಯಲ್ಲಿ ಉತ್ಕೃಷ್ಟ ಜ್ಯೂರಿಗಳಿಲ್ಲ ಎಂದು ಹೇಳಿದ್ದರು ಎಂದು ಹಝಾರೆ ತಿಳಿಸಿದ್ದರು.
ಈ ವರ್ಷ ಮಾರ್ಚ್ 23ರಂದು ಹಝಾರೆ ಅವರು ರಾಮಲೀಲಾ ಮೈದಾನದಲ್ಲಿ ಉಪವಾಸ ಮುಷ್ಕರ ನಡೆಸಿದ್ದರು. ಆದರೆ, ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ಲಿಖಿತ ಭರವಸೆ ನೀಡಿದ ಬಳಿಕ ಅವರು ಉಪವಾಸ ಮುಷ್ಕರ ಹಿಂದೆ ತೆಗೆದುಕೊಂಡಿದ್ದರು.





