ಮಲೇಶ್ಯ ವಿರುದ್ಧ ನೆದರ್ಲೆಂಡ್‌ಗೆ 7-0 ಭರ್ಜರಿ ಜಯ
ಜೆರೊಯನ್ ಹರ್ಟ್ಸ್‌ಬರ್ಗರ್ ಹ್ಯಾಟ್ರಿಕ್

ಭುವನೇಶ್ವರ, ಡಿ.1: ಜೆರೊಯನ್ ಹರ್ಟ್ಸ್‌ಬರ್ಗರ್ ಹ್ಯಾಟ್ರಿಕ್ ಗೋಲುಗಳ ನೆರವಿನಲ್ಲಿ ನೆದರ್ಲೆಂಡ್ ತಂಡ ಪುರುಷರ ಹಾಕಿ ವಿಶ್ವಕಪ್ ‘ಡಿ’ ಗುಂಪಿನ ಪಂದ್ಯದಲ್ಲಿ ಅಸಹಾಯಕ ಮಲೇಶ್ಯ ವಿರುದ್ಧ 7-0 ಭರ್ಜರಿ ಜಯ ಗಳಿಸಿದೆ.
ವಿಶ್ವಕಪ್‌ನ ಕಳೆದ ಆವೃತ್ತಿಯಲ್ಲಿ ಬೆಳ್ಳಿ ತನ್ನದಾಗಿಸಿದ್ದ ನೆದರ್ಲೆಂಡ್‌ಗೆ ಏಶ್ಯನ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಮಲೇಶ್ಯ ಸುಲಭವಾಗಿ ಶರಣಾಗಿದೆ. ಜೆರೊಯನ್ ಹರ್ಟ್ಸ್‌ಬರ್ಗರ್ ಹ್ಯಾಟ್ರಿಕ್ ಜೊತೆಗೆ ತಂಡದ ಸಹ ಆಟಗಾರರಾದ ಮಿರ್ಕೊ ಪ್ರಿಯುಜ್ಸೆರ್ , ಮಿಂಕ್ ವ್ಯಾನ್ ಡರ್ ವೆರ್ಡಾನ್ , ರಾಬರ್ಟ್ ಕೆಂಪೆರ್ಮನ್ ಮತ್ತು ಥಿಯರಿ ಬ್ರಿಂಕ್‌ಮನ್ ತಲಾ ಒಂದು ಗೋಲು ಜಮೆ ಮಾಡಿದರು.
ನಾಲ್ಕನೇ ಬಾರಿ ವಿಶ್ವಕಪ್ ಎತ್ತುವ ಯೋಜನೆಯಲ್ಲಿರುವ ನೆದರ್ಲೆಂಡ್ ತಂಡ ಎದುರಾಳಿ ಮಲೇಶ್ಯಕ್ಕೆ ಒಂದು ಗೋಲನ್ನು ದಾಖಲಿಸಲು ಅವಕಾಶ ನೀಡಲಿಲ್ಲ. ಏಶ್ಯನ್ ತಂಡ ಭಾರೀ ಅಂತರದಲ್ಲಿ ಸೋಲು ಅನುಭವಿಸಿತು.
ನೆದರ್ಲೆಂಡ್ ಇನ್ನಷ್ಟು ಗೋಲು ಗಳಿಸುವ ಯತ್ನ ನಡೆಸಿತ್ತು. ಆದರೆ ಮಲೇಶ್ಯದ ಗೋಲು ಕೀಪರ್ ಕುಮಾರ್ ಸುಬ್ರಹ್ಮಣ್ಯಂ ಇದಕ್ಕೆ ಅವಕಾಶ ನೀಡಲಿಲ್ಲ.
ಮಲೇಶ್ಯದ ಆಟಗಾರರಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಎದುರಾಳಿ ತಂಡ ಭರ್ಜರಿ ಜಯ ಗಳಿಸುವಂತಾಯಿತು. ನೆದರ್ಲೆಂಡ್ ಮೂಲದ ರೊಲ್ಯಾಂಟ್ ಒಲ್ಟಾಮಸ್ ಅವರು ಮಲೇಶ್ಯದ ಕೋಚ್. ಅವರಿಗೆ ತನ್ನ ತಂಡದ ಸೋಲು ತಪ್ಪಿಸಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ. ಅವರು ಕೋಚ್ ಆಗಿದ್ದಾಗ ನೆದರ್ಲೆಂಡ್‌ನ ಪುರುಷರ ತಂಡ 1998ರಲ್ಲಿ ಮಹಿಳೆಯರ ತಂಡ 1990ರಲ್ಲಿ ವಿಶ್ವಕಪ್ ಜಯಿಸಿತ್ತು ಎನ್ನುವುದು ವಿಶೇಷ. ಇಂದಿನ ಪಂದ್ಯದಲ್ಲಿ ನೆದರ್ಲೆಂಡ್ 29 ಬಾರಿ ಗೋಲು ಗಳಿಸುವ ಯತ್ನ ನಡೆಸಿತ್ತು. 7 ಬಾರಿ ಚೆಂಡು ಗುರಿುತ್ತ ತಲುಪಿತು. ಆದರೆ ಮಲೇಶ್ಯ 3 ಬಾರಿ ಗೋಲು ಗಳಿಸಲು ಯತ್ನಿಸಿದರೂ ಚೆಂಡು ಒಂದು ಬಾರಿಯೂ ಬಲೆಯತ್ತ ಬೀಳಲಿಲ್ಲ.
ನೆದರ್ಲೆಂಡ್ ಹ್ಯಾಟ್ರಿಕ್ ಹೀರೊ ಜೆರೊಯನ್ ಹರ್ಟ್ಸ್‌ಬರ್ಗರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನ ರಾದರು.
214ನೇ ಪಂದ್ಯವನ್ನಾಡಿದ ನೆದರ್ಲೆಂಡ್‌ನ ಹರ್ಟ್ಸ್ ಬರ್ಗರ್ 12ನೇ ನಿಮಿಷದಲ್ಲಿ ಚೆಂಡನ್ನು ಗುರಿಯತ್ತ ಕಳುಹಿಸಿ ನೆದರ್ಲೆಂಡ್‌ನ ಗೋಲು ಖಾತೆ ತೆರೆದರು. ಇದು ಅವರ 102ನೇ ಅಂತರ್‌ರಾಷ್ಟ್ರೀಯ ಗೋಲು ಆಗಿತ್ತು.
14ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಮಲೇಶ್ಯ ಪಡೆಯಿತು. ಪ್ರಥಮ ಕ್ವಾರ್ಟರ್ ಕೊನೆಯಲ್ಲಿ ಮಲೇಶ್ಯದ ರಾಝೀ ರಹೀಮ್ ಮತ್ತು ಸೈಯದ್ ಚೊಲಾನ್ ಗೋಲು ಗಳಿಸುವ ಯತ್ನ ನಡೆಸಿದರು. ಆದರೆ ನೆದರ್ಲೆಂಡ್‌ನ ಗೋಲು ಕೀಪರ್ ಬ್ಲಾಕ್ ಪಿರ್ಮಿನ್ ಗೋಲು ನಿರಾಕರಿಸಿದರು.ಪ್ರಥಮ ಕ್ವಾರ್ಟರ್ ಕೊನೆಗೊಂಡಾಗ ನೆದರ್ಲೆಂಡ್ 1-0 ಮುನ್ನಡೆ ಸಾಧಿಸಿತ್ತು. ದ್ವಿತೀಯ ಕಾರ್ಟರ್ ಆರಂಭಗೊಂಡು ಎರಡು ನಿಮಿಷದಲ್ಲಿ ನೆದರ್ಲೆಂಡ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಹಟ್ಸ್‌ಬರ್ಗರ್ ಎರಡನೇ ಗೋಲು ಜಮೆ ಮಾಡಲು ಯತ್ನ ನಡೆಸಿದರು. ಆದರೆ ಮಲೇಶ್ಯದ ಗೋಲು ಕೀಪರ್ ಇದಕ್ಕೆ ಅವಕಾಶ ನೀಡಲಿಲ್ಲ. 21ನೇ ನಿಮಿಷದಲ್ಲಿ ನೆದರ್ಲೆಂಡ್ ತಂಡದ ಆಟಗಾರ ಕೆಂಪೆರ್ಮನ್
ಗೋಲು ಗಳಿಸಲು ಪಯತ್ನ ನಡೆಸಿದರು. ಗೋಲು ಕೀಪರ್ ಕುಮಾರ್ ಗೋಲು ನಿರಾಕರಿಸಿದರು. ರಾಬರ್ಟ್ ಕೆಂಪೆರ್ಮನ್‌ಗೆ ಇಂದಿನದ್ದು 200ನೇ ಪಂದ್ಯವಾಗಿತ್ತು. 21ನೇ ನಿಮಿಷದಲ್ಲಿ ಮಿರ್ಕೊ ಪ್ರುಜ್ಸೆರ್ ಗೋಲು ಬಾರಿಸಿ ತಂಡಕ್ಕೆ 2-0 ಮುನ್ನಡೆಗೆ ನೆರವಾದರು.
28ನೇ ನಿಮಿಷದಲ್ಲಿ ಪ್ರುಯಿಜ್ಸೆರ್ ಚೆಂಡನ್ನು ವಶಕ್ಕೆ ತೆಗೆದುಕೊಂಡು ಹರ್ಟ್ಸ್‌ಬರ್ಗರ್ ಕಡೆಗೆ ರವಾನಿಸಿದರು. ಈ ಅವಕಾಶವನ್ನು ಹರ್ಟ್ಸ್‌ಬರ್ಗರ್ ಈ ಅವಕಾಶವನ್ನು ವ್ಯರ್ಥ ಮಾಡಲಿಲ್ಲ. ಅವರ ಮೂಲಕ 29ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಂತು. 35ನೇ ನಿಮಿಷದಲ್ಲಿ ಮಿಂಕ್ ವ್ಯಾಡರ್ ವೆರ್ಡೆನ್ ಗೋಲು ಗಳಿಸಿದರು. ನೆದರ್ಲೆಂಡ್‌ಗೆ 4-0 ಮುನ್ನಡೆ ಸಾಧಿಸಿತು.
42ನೇ ನಿಮಿಷದಲ್ಲಿ ರಾಬರ್ಟ್ ಕೆಂಪೆರ್ಮನ್ ಗೋಲು ದಾಖಲಿಸಿದರು. ಬಳಿಕ 56ನೇ ನಿಮಿಷದಲ್ಲಿ ಮತ್ತು 60ನೇ ನಿಮಿಷದಲ್ಲಿ ಹೆರ್ಟ್ಸ್‌ಬರ್ಗರ್ ಅವಳಿ ಗೋಲು ಕಬಳಿಸಿದರು. ನೆದರ್ಲೆಂಡ್ 7-0 ಅಂತರದಲ್ಲಿ ಜಯ ಗಳಿಸಿತು.







