ಶಿವಮೊಗ್ಗ: ಆರು ತಿಂಗಳಲ್ಲಿ ಜಿಲ್ಲಾದ್ಯಂತ 165 ಏಡ್ಸ್ ಸೋಂಕಿತರು

ಶಿವಮೊಗ್ಗ, ಡಿ. 1: ಜಿಲ್ಲೆಯಲ್ಲಿ 2018ರ ಏಪ್ರಿಲ್‌ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ 40,701 ಸಾಮಾನ್ಯ ಅಭ್ಯರ್ಥಿಗಳಿಗೆ ಎಚ್‌ಐವಿ ಸೋಂಕಿನ ಪರೀಕ್ಷೆ ನಡೆಸಿದ್ದು, 165 ಜನರಲ್ಲಿ ಸೊಂಕು ಕಂಡುಬಂದಿದೆ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ತಿಳಿಸಿದ್ದಾರೆ.
2013-14 ರಿಂದ 2018ರ ಮಾರ್ಚ್‌ವರೆಗೆ ಎಚ್‌ಐವಿ ಪರೀಕ್ಷೆಗೊಳಪಟ್ಟ 2,73,403 ಅಭ್ಯರ್ಥಿಗಳಲ್ಲಿ 2,074 ಜನ ಹಾಗೂ ಪರೀಕ್ಷೆ ಮಾಡಿಸಿಕೊಂಡ 1,48,615 ಗರ್ಭಿಣಿ ಸ್ತ್ರೀಯರಲ್ಲಿ 91 ಗರ್ಭಿಣಿ ಮಹಿಳೆಯರಿಗೆ ಏಡ್ಸ್ ಸೋಂಕಿರುವುದನ್ನು ಗುರುತಿಸಿಲಾಗಿತ್ತು. ಸೋಂಕಿತರಿಗೆ ಸಮಾಲೋಚನೆ ನಡೆಸಿ, ಸೂಕ್ತ ಸಲಹೆ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 2018ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಪರೀಕ್ಷೆಗೊಳಪಟ್ಟ 11,65,038 ಪುರುಷರಲ್ಲಿ 9,369 ಮಂದಿ ಹಾಗೂ 7,02,409 ಗರ್ಭಿಣಿ ಸ್ತ್ರೀಯರಲ್ಲಿ 416 ಗರ್ಭಿಣಿಯರಲ್ಲಿ ಏಡ್ಸ್ ಸೋಂಕಿರುವುದನ್ನು ಗುರುತಿಸಲಾಗಿದೆ. ಇದರಿಂದಾಗಿ ಜಿಲ್ಲೆಯು ಎಚ್‌ಐವಿ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ 26ನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ರೆಡ್‌ರಿಬ್ಬನ್ ಘಟಕ ಹೊಂದಿರುವ ಆಯ್ದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಗ್ರಾಮಗಳಲ್ಲಿ ಜನಪದ ಕಲಾಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಎಚ್‌ಐವಿ ವೈರಾಣು ಮನುಷ್ಯನ ದೇಹಕ್ಕೆ ಸೇರಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡಿ ಮಾನವನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವುದಲ್ಲದೇ ಹಲವಾರು ರೋಗಗಳಿಗೆ ಕಾರಣವಾಗಲಿದೆ. ಈ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ಮನುಷ್ಯನ ರೋಗ ನಿರೋಧಕ ಶಕ್ತಿ ಹಾಳಾಗಿ ಮನುಷ್ಯನ ದೇಹ ರೋಗಗಳ ಹಂದರವಾದಾಗ, ಮನುಷ್ಯನ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲಿದೆ. ಎಚ್‌ಐವಿ ಸೋಂಕಿತ ರೋಗಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯಿಂದ ರಕ್ತ ಪಡೆಯುವುದರಿಂದ, ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಎಚ್‌ಐವಿ ಸೋಂಕಿತ ಸೂಜಿ ಅಥವಾ ಸಿರೇಂಜ್‌ಗಳನ್ನು ಬಳಸುವುದರಿಂದ ಹಾಗೂ ಸೋಂಕಿತ ತಾಯಂದಿರಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲಿ ಮತ್ತು ಎದೆ ಹಾಲುಣಿಸುವುದರಿಂದ ಇದು ಹರಡುತ್ತದೆ ಎಂದಿದ್ದಾರೆ.
ಎಚ್‌ಐವಿ ಸೋಂಕು ತಗಲಿದವರೆಲ್ಲಾ ಏಡ್ಸ್ ರೋಗಕ್ಕೆ ತುತ್ತಾದವರಲ್ಲ
ಏಡ್ಸ್ ರೋಗ ಇರುವವರೆಲ್ಲರೂ ಎಚ್‌ಐವಿ ಸೋಂಕಿತರಾಗಿರುತ್ತಾರೆ. ಆದರೆ, ಎಚ್‌ಐವಿ ಸೋಂಕು ತಗುಲಿದವರೆಲ್ಲರೂ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ತೀರಾ ದುರ್ಬಲವಾದಾಗ ರೋಗಿ ಏಡ್ಸ್ ರೋಗಕ್ಕೆ ತುತ್ತಾಗಿ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲಗೊಂಡು ರೋಗಿ ಮರಣ ಹೊಂದುವ ಸಾಧ್ಯೆತೆ ಹೆಚ್ಚು.
‘ಎಚ್‌ಐವಿ ಸೊಳ್ಳೆಯಿಂದ ಹರಡುವುದಿಲ್ಲ’
ಕೈಕುಲುಕುವುದು, ಆಲಿಂಗನ, ಸೀನು, ಕೆಮ್ಮುಗಳಿಂದ, ಎಂಜಲು, ಬೆವರು, ಕಣ್ಣೀರು, ಸಿಂಬಳ, ಮಲ-ಮೂತ್ರ ಮುಂತಾದವುಗಳನ್ನು ಸ್ಪರ್ಶಿಸುವುದರಿಂದ, ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ, ಸೊಳ್ಳೆಗಳಿಂದ ಈ ರೋಗ ಹರಡುವುದಿಲ್ಲ ಎಂದು ಆಧಿಕಾರಿಗಳು ತಿಳಿಸಿದ್ದಾರೆ.







