ಹಾಕಿ ವಿಶ್ವಕಪ್: ಭಾರತಕ್ಕೆ ಬೆಲ್ಜಿಯಂ ತಂಡದ ಪರೀಕ್ಷೆ

ಭುವನೇಶ್ವರ, ಡಿ.1: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಗೆಲುವಿನೊಂದಿಗೆ ಆರಂಭಿಸಿದ್ದ ಭಾರತ ರವಿವಾರ ನಡೆಯಲಿರುವ ಪಂದ್ಯದಲ್ಲಿ ನಂ.3 ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಭಾರತ ಈ ಪಂದ್ಯದಲ್ಲಿ ಜಯಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್‌ಗೇರುವ ಅವಕಾಶ ಇದೆ. 43 ವರ್ಷಗಳಲ್ಲಿ ಮೊದಲ ಇತಿಹಾಸ ಬರೆಯುವ ಯೋಜನೆಯಲ್ಲಿರುವ ಭಾರತ ಬುಧವಾರ ಎದುರಿಸಿದ್ದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 5-0 ಅಂತರದಲ್ಲಿ ಮಣಿಸಿತ್ತು.
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದಿದ್ದ ಬೆಲ್ಜಿ ಯಂ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 2-1 ಜಯ ಗಳಿಸಿತ್ತು. ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿದ್ದ ಭಾರತ ವಿಶ್ವಕಪ್‌ನಲ್ಲಿ ಒಂದು ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಕಳೆದ ಪಂದ್ಯದಲ್ಲಿ ಭಾರತದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಂಡದ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ಕಂಡು ಬಂದಿತ್ತು. ಅದೇ ಪ್ರದರ್ಶನವನ್ನು ಬೆಲ್ಜಿಯಂ ವಿರುದ್ಧ ಮುಂದುವರಿಸಬೇಕಾಗಿದೆ.ಭಾರತ ಪ್ರಥಮ ಕ್ವಾರ್ಟರ್‌ನಲ್ಲಿ 2 ಗೋಲು ದಾಖಲಿಸಿ ಮೇಲುಗೈ ದಾಖಲಿಸಿತ್ತು. 10ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಮತ್ತು 12ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಗೋಲು ಬಾರಿಸಿದರು.
ದ್ವಿತೀಯ ಕ್ವಾರ್ಟರ್‌ನಲ್ಲಿ ಗೋಲು ಬರಲಿಲ್ಲ. ಈ ಕಾರಣದಿಂದಾಗಿ ದ್ವಿತೀಯಾರ್ಧ ಪೂರ್ಣಗೊಂಡಾಗ ಭಾರತ 2-0 ಮುನ್ನಡೆ ಸಾಧಿಸಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಸಿಮ್ರಾನ್‌ಜಿತ್ ಸಿಂಗ್ (43ನೇ ನಿಮಿಷ) ಮತ್ತು ಲಲಿತ್ ಉಪಾಧ್ಯಾಯ (45ನೇ ನಿ.) ಗೋಲು ಜಮೆ ಮಾಡಿದರು. ಕೊನೆಯಲ್ಲಿ ಸಿಮ್ರಾನ್‌ಜಿತ್ ಸಿಂಗ್(46ನೇ ನಿ.) ಎರಡನೇ ಗೋಲು ದಾಖಲಿಸುವ ಮೂಲಕ ಭಾರತ 5-0 ಅಂತರದಲ್ಲಿ ಜಯ ದಾಖಲಿಸಿತು. ಬೆಲ್ಜಿಯಂ ವಿರುದ್ಧ ಭಾರತದ ದಾಖಲೆ ಉತ್ತಮವಾಗಿಲ್ಲ. 2013ರ ಬಳಿಕ ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದೆ. ಭಾರತ 5 ಪಂದ್ಯಗಳಲ್ಲಿ ಜಯ ಗಳಿಸಿದೆ. 1 ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 13ಪಂದ್ಯಗಳಲ್ಲಿ ಬೆಲ್ಜಿಯಂ ಜಯ ಗಳಿಸಿದೆ.
ಈ ವರ್ಷದ ಆರಂಭದಲ್ಲಿ ಬ್ರೆಡಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಬೆಲ್ಜಿಯಂ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 1-1 ಗೋಲುಗಳಿಂದ ಡ್ರಾಗೊಂಡಿತ್ತು.
ವಿಶ್ವಕಪ್ ಎರಡು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಸಣ್ಣ ತಪ್ಪು ಮಾಡಿದರೂ ತಂಡಕ್ಕೆ ಫಲಿತಾಂಶದಲ್ಲಿ ಕೆಲವೊಮ್ಮೆ ಹಿನ್ನಡೆಯಾಗುತ್ತದೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ದೊರೆತ 5 ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಒಂದು ಬಾರಿ ಮಾತ್ರ ಗೋಲು ಬಂದಿತ್ತು. ಅದೇ ರೀತಿ ಕೆನಡಾ ವಿರುದ್ಧ ಬೆಲ್ಜಿಯಂ 2ಅವಕಾಶಗಳನ್ನು ಕೈ ಚೆಲ್ಲಿತ್ತು. ಭಾರತಕ್ಕೆ ಪೆನಾಲ್ಟಿ ಗೋಲು ಬಾರದಿರುವ ವಿಚಾರದಲ್ಲಿ ಕೋಚ್ ಹರೇಂದ್ರ ಸಿಂಗ್ ಅತೃಪ್ತಿ ವ್ಯಕ್ತಪಡಿಸಿಲ್ಲ. ಭಾರತ 5 ಗೋಲು ದಾಖಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಖುಶಿಯಾಗಿದೆ.
ರವಿವಾರ ನಡೆಲಿರುವ ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆನಡಾವನ್ನು ದಕ್ಷಿಣ ಆಫ್ರಿಕ ಎದುರಿಸಲಿದೆ.







